ಕನ್ನಡಪ್ರಭ ವಾರ್ತೆ ಕಬ್ಬೂರ
ಕೇಳದಿರುವ ಭಾಗ್ಯ ಕೊಡುವುದಕ್ಕಿಂತ, ಅನ್ನದಾತರು ಅಂಗಲಾಚಿ ಕೇಳುತ್ತಿರುವ ನ್ಯಾಯಯುತ ಕಬ್ಬಿಗೆ ಬೆಲೆ ನೀಡಿ, ರೈತರ ಬೆನ್ನಿಗೆ ಕಾರ್ಖಾನೆಗಳು ಬೆನ್ನೆಲುಬಾಗಿ ನಿಲ್ಲಲಿ ಎಂದು ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಗುರುವಾರ ಕಬ್ಬೂರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿವಿಧ ರೈತಪರ ಸಂಘಟನೆಗಳು ಹಮ್ಮಿಕೊಂಡಿದ್ದ ಟನ್ ಕಬ್ಬಿಗೆ ಕನಿಷ್ಠ ₹3,500 ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರೈತರು ತಾವು ಬೆಳೆದ ಬೆಳೆಗೆ ಬೆಲೆ ಕೇಳುತ್ತಿದ್ದಾರೆ ವಿನಃ ಬೇರೆ ಯಾವ ದುರುದ್ದೇಶವೂ ಇಲ್ಲ. ರೈತರು ರಸ್ತೆಗಿಳಿದು ಕಳೆದ ವಾರದಿಂದ ಗಂಭೀರವಾಗಿ ಪ್ರತಿಭಟಿಸುತ್ತಿದ್ದರೂ ಕಾರ್ಖಾನೆ ಮಾಲೀಕರು, ಸರ್ಕಾರ ಗಮನಿಸದೇ ಇರುವುದು ರೈತರ ಸಹನೆ ಪರೀಕ್ಷೆ ಒಳ್ಳೆಯದಲ್ಲ. ರೈತರು ಸಹನೆ ಕಳೆದುಕೊಂಡರೆ ಗಂಭೀರ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಸಿದರು. ಪಟ್ಟಣದ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡ ಪ್ರತಿಭಟನೆ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ರೈತರ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಹಲವು ರೈತ ಸಂಘಟನೆಗಳ ಪ್ರಮುಖರು ಮಾತನಾಡಿದರು. ಕಬ್ಬು ದರಕ್ಕಾಗಿ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಜಿಲ್ಲೆಯಾದ್ಯಂತ ತೀವ್ರಗೊಳ್ಳತೊಡಗಿದೆ. ಸರ್ಕಾರ ಹಾಗೂ ರೈತರ ಮಧ್ಯೆ ಒಮ್ಮತ ಮೂಡದ ಕಾರಣ ಪ್ರತಿ ಹಳ್ಳಿಗಳ್ಳಲ್ಲಿಯೂ ಪ್ರತಿಭಟನೆ ಮುಂದುವರಿದಿದೆ. ಕಳೆದ 7 ದಿನಗಳಿಂದ ಗುರ್ಲಾಪುರ ಕ್ರಾಸ್‌ನಲ್ಲಿ ರೈತರ ಹೋರಾಟ ನಡೆದರು ರಾಜ್ಯ ಸರ್ಕಾರ ಮೌನವಾಗಿದೆ. ರೈತರ ಶಾಪ ತಟ್ಟಿದರೆ ಯಾವುದೇ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು. ಶೀಘ್ರ ಸರ್ಕಾರ ರೈತರಿಗೆ ಸ್ಪಂದಿಸದಿದ್ದರೆ ರಾಜ್ಯ ಹೆದ್ದಾರಿ ಹಾಗೂ ಎಲ್ಲ ರಸ್ತೆಗಳನ್ನು ತಡೆಗಟ್ಟಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಮೇಶ ಬೆಲ್ಲದ, ಮಿಲನ ಪಾಟೀಲ, ಶ್ರೀಶೈಲ ಹಂಜಿ, ಸಹದೇವ ಚಿಮ್ಮಟ, ಆರ್.ಕೆ.ಬಾಗಿ, ಅಮೀರ ಮುಲ್ತಾನಿ, ಕಾಶಪ್ಪಾ ಕಾಡೇಶಗೋಳ, ಶಂಕರ ಟಿರಕಿ, ಶ್ರೀಶೈಲ ತೇರದಾಳೆ, ಪುಟ್ಟು ಹಳ್ಳೂರ, ಅಣ್ಣಪ್ಪಾ ಚಿಮ್ಮಟ, ಬಸವರಾಜ ಮಠದ, ರಾಜು ಮುಗಳಖೋಡ, ರಮೇಶ ಮಂಟೂರ, ಬಾಬು ಜಿಪ್ರೆ, ಅಬ್ಬಾಸ ನದಾಫ್, ರವಿ ಕುಂಭೋಜಿ, ಚಿದಾನಂದ ಕಪಲಿ, ಮಹಾನಿಂಗ ಹಂಜಿ, ಮನೋಜ ಮನಗೂಳಿ, ಎಂ.ಕೆ.ಪೂಜೇರಿ, ಸುಧಾಕರ ಪಾಟೀಲ, ವಿಠ್ಠಲ ಕುಕನೂರ, ಸುಭಾಸ ಬಡಿಗೇರ, ಸತೀಶ ಹೇರಲಗಿ, ಶೀತಲ ಹೇರಲಗಿ, ಕೆಂಪಣ್ಣ ಕಾಮಗೌಡ, ರಾಮಪ್ಪ ಕುಕನೂರ, ಮಹಾದೇವ ಖೋತ, ಧರೆಪ್ಪಾ ಖೋತ, ಶಂಕರ ಚೌಗಲಾ, ರವಿ ವಿಜಯನಗರ, ಸುಭಾಷ ಕಾಮಗೌಡ, ಸುಭಾಷ ನಾಯಿಕ, ಅಶೋಕ ದಂಡಿನ, ಸಂತೋಷ ಮಠದ, ಮಹಾಂತೇಶ ಕಾಮಗೌಡ ಸೇರಿದಂತೆ ರೈತರು ಪಾಲ್ಗೊಂಡಿದ್ದರು.