ರೈತರು ಒಂದು ಇಂಚು ಭೂಮಿ ಕೊಡಬೇಡಿ: ಎಚ್‌.ಡಿ. ಕುಮಾರಸ್ವಾಮಿ

KannadaprabhaNewsNetwork |  
Published : Nov 11, 2025, 01:15 AM IST
10ಕೆಆರ್ ಎಂಎನ್ 2.ಜೆಪಿಜಿಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳ ರೈತರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬಿಡದಿ ಟೌನ್‌ಶಿಪ್ ಮಾಡುವುದು ಕುಮಾರಸ್ವಾಮಿ ಅವರ ಕಾಲದಲ್ಲಿ ಆಗಿರುವ ತೀರ್ಮಾನ ಎಂದು ನನ್ನ ಹೆಸರಿನಲ್ಲಿ ಶೆಲ್ಟರ್ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳು ಬೇರೆ ಇವೆ.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಟೌನ್‌ಶಿಪ್‌ ಹೆಸರಿನಲ್ಲಿ ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದು ಇಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜತೆ ನಾನಿದ್ದೇನೆ ಎಂದು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅಭಯ ನೀಡಿದರು.

ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳ ರೈತರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ರೈತರಿಗೆ ಮಿಡಿಯುವುದು ಬಿಟ್ಟು ಈ ಸರ್ಕಾರ ರಿಯಲ್ ಎಸ್ಟೇಟ್ ಕುಳಗಳಿಗೆ ಮಿಡಿಯುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಬಿಡದಿ ಟೌನ್‌ಶಿಪ್ ಮಾಡುವುದು ಕುಮಾರಸ್ವಾಮಿ ಅವರ ಕಾಲದಲ್ಲಿ ಆಗಿರುವ ತೀರ್ಮಾನ ಎಂದು ನನ್ನ ಹೆಸರಿನಲ್ಲಿ ಶೆಲ್ಟರ್ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳು ಬೇರೆ ಇವೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭೂಮಿಗೆ ಭಾರೀ ಬೆಲೆ ಬಂದಿದೆ. 9 ಸಾವಿರ ಎಕರೆ ಭೂಮಿಯನ್ನು ಟೌನ್‌ಶಿಪ್‌ಗೆ ಸ್ವಾಧೀನ ಮಾಡಿಕೊಳ್ಳಲು ಹೊರಟಿದ್ದಾರೆ. ಇದಕ್ಕೆ ನೀವೆಲ್ಲರು (ರೈತರು) ವಿರೋಧ ಇದ್ದಾರೆ. ನಾನು ರೈತರ ಪರ ಇದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಈಗಲ್ ಟನ್‌ಗೆ ನಿಗದಿ ಮಾಡಿದಷ್ಟು ಪರಿಹಾರ ನೀಡಲಿ:

ಬಿಡದಿಯಲ್ಲಿ ಸರ್ಕಾರ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಭೂಮಿಯ ವ್ಯಾಪ್ತಿಯಲ್ಲಿಯೇ ಈಗಲ್‌ಟನ್ ಗಾಲ್ಫ್ ಕ್ಲಬ್ ಇದೆ. ಅದು ಸರ್ಕಾರಿ ಖರಾಬು ಭೂಮಿ ಅತಿಕ್ರಮಿಸಿದೆ ಆರೋಪ ಮಾಡಲಾಗಿತ್ತು. ಆ ಸಂಸ್ಥೆಯ ಮೇಲೆ ಆರೋಪಗಳನ್ನು ಹೊರೆಸಿ 2018ರಲ್ಲಿ ಚದರ ಅಡಿ ಲೆಕ್ಕದಲ್ಲಿ ದಂಡ ವಿಧಿಸಿದ್ದಾರೆ. ಈಗಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅದೇ ಈಗಲ್ ಟನ್ ಕ್ಲಬ್‌ಗೆ ಊಟಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ 98 ಸಾವಿರ ರುಪಾಯಿ ಬಿಲ್ ಕೊಟ್ಟಿದ್ದರು. ನನಗೇ ಬಿಲ್ ಕೊಡುತ್ತೀರಾ ಎಂದು 70 ಎಕರೆ ಕರಾಬು ಭೂಮಿಗೆ 984 ಕೋಟಿ ದಂಡ ವಿಧಿಸಿದರು. ಅಂದರೆ, ಪ್ರತೀ ಎಕರೆಗೆ 13 ಕೋಟಿ ದಂಡ ವಿಧಿಸಬೇಕು ಎಂದು ಸಂಪುಟ ಸಭೆ ತೀರ್ಮಾನ ಕೈಗೊಂಡಿತು. ನಿಮ್ಮ ಪಕ್ಷವೇ ಅಧಿಕಾರದಲ್ಲಿ ಇದ್ದಾಗ ನಿಮ್ಮವರೇ ಮುಖ್ಯಮಂತ್ರಿ, ಸಚಿವರು ಇದ್ದಾಗ ನೀವೆ ನಿಗದಿ ಮಾಡಿದ ದರ ಅದಲ್ಲವೇ? ಈಗ ನೀವೇ ರೈತರಿಗೆ 1:3 ಅನುಪಾತದಲ್ಲಿ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.

ಕನಕಪುರದಲ್ಲಿ ಒಣಭೂಮಿ ಇದ್ರೆ ಅಲ್ಲಿ ಟೌನ್ ಶಿಪ್ ಮಾಡಲಿ:

ಈ ಹಿಂದೆ ಕನಕಪುರದಲ್ಲಿ ಹಾಲಿನ ಡೇರಿ ಮಾಡುವಾಗ ರೈತರಿಗೆ ಎಷ್ಟು ದುಡ್ಡು ಕೊಟ್ಟಿರಿ? ನಿಮ್ಮ ಪಟಾಲಂಗೆ ಎಷ್ಟು ಪರಿಹಾರ ಕೊಟ್ಟಿರಿ? ಅಲ್ಲೆಲ್ಲೂ ಒಣ ಬೇಸಾಯದ ಭೂಮಿ ಇದೆ ಅಂತ ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆ ಭೂಮಿಯನ್ನೇ ವಶಕ್ಕೆ ತೆಗೆದುಕೊಂಡು ಟೌನ್‌ಶಿಪ್ ಮಾಡಬಹುದು ಅಲ್ಲವೇ? ರಾಜ್ಯದಲ್ಲಿ ಬೇರೆ ಬೇರೆ ಇಂತಹ ಒಣಭೂಮಿ ಬೇಕಾದಷ್ಟು ಇದೆ. ಅಲ್ಲೆಲ್ಲ ಮಾಡುವುದು ಬಿಟ್ಟು ಬಿಡದಿಯ ಮೇಲೆಯೇ ಯಾಕೆ ಬಿದ್ದಿದ್ದೀರಿ ಎಂದು ಕೇಂದ್ರ ಸಚಿವರು ಕೆಂಡ ಕಾರಿದರು.

ನಿಮ್ಮ ಉದ್ದೇಶ ಬಿಡದಿಯ ಜನರನ್ನು ಉದ್ಧಾರ ಮಾಡುವುದು ಅಲ್ಲ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಲು ಈ ಯೋಜನೆ ರೂಪಿಸಿದ್ದೀರಿ ಅಷ್ಟೇ. ಭೂಮಿ ಸ್ವಾಧೀನ ಮಾಡಿಕೊಂಡು ಪರಿಹಾರ ಕೊಡಲಿಕ್ಕೆ ನಿಮ್ಮಲ್ಲಿ ದುಡ್ಡಿಲ್ಲ. ಒಣ ಭೂಮಿ ಇರುವ ಕಡೆ ಟೌನ್‌‌ಶಿಪ್ ಮಾಡಿ. ಯಾರು ಬೇಡ ಅಂತಾರೆ. ಕೃಷಿಗೆ ಉತ್ತಮವಾದ ವಾತಾವರಣವಿರುವ ಕಡೆ ರೈತರನ್ನು ಒಕ್ಕಲೆಬ್ಬಿಸಬೇಡಿ. ಯಾವುದೇ ಒತ್ತಡ, ದಬ್ಬಾಳಿಕೆಗೆ ರೈತರು ಹೆದರಬಾರದು. ರೈತರೊಂದಿಗೆ ನಾನಿದ್ದೇನೆ ಎಂದು ಕುಮಾರಸ್ವಾಮಿರವರು ರೈತರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ , ಬಿಡದಿ ಪುರಸಭೆ ಅಧ್ಯಕ್ಷೆ ಬಾನು ಪ್ರಿಯಾ, ತಾಪಂ ಮಾಜಿ ಸದಸ್ಯ ಪ್ರಕಾಶ್, ಮುಖಂಡರಾದ ಶೇಷಪ್ಪ, ಸೋಮೇಗೌಡ, ಭರತ್ ಕೆಂಪಣ್ಣ, ಪುಟ್ಟಣ್ಣ, ಮಂಜುನಾಥ್ ಮತ್ತಿತರರು ಹಾಜರಿದ್ದರು.

--------

10ಕೆಆರ್ ಎಂಎನ್ 2.ಜೆಪಿಜಿ

ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳ ರೈತರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

PREV

Recommended Stories

ರಾಜ್ಯದ ಎಲ್ಲ ಹನುಮಂತ ದೇವಸ್ಥಾನಗಳಲ್ಲಿ ಹನುಮಾನ ಚಾಲೀಸಾ ಪಠಣ: ದತ್ತಾವಧೂತ ಗುರು
ಪತ್ರಕರ್ತರ ಸಂಘದ ಚುನಾವಣೆ: 25 ಸ್ಥಾನಗಳಿಗೆ ಆಯ್ಕೆ