ಸುರಿದ ರೋಹಿಣಿ, ಬಿತ್ತನೆ ಕಾರ್ಯಕ್ಕೆ ಮುಂದಾದ ರೈತರು

KannadaprabhaNewsNetwork |  
Published : May 31, 2026, 02:45 AM IST
ಪೋಟೊ30ಕೆಎಸಟಿ1: ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ರೈತ ದೊಡ್ಡಪ್ಪ ಚೌಡ್ಕಿ ಬಿತ್ತನೆಯ ಕಾರ್ಯದಲ್ಲಿ ತೊಡಗಿಕೊಂಡಿರುವದು. | Kannada Prabha

ಸಾರಾಂಶ

ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಿ ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಸಜ್ಜಿ, ಎಳ್ಳು, ಹೆಸರು, ಅಲಸಂದಿ ಸೇರಿದಂತೆ ದವಸ ದಾನ್ಯ ಬಿತ್ತನೆಯಲ್ಲಿ ಉತ್ಸಾಹದಿಂದ ರೈತರು ಪಾಲ್ಗೊಂಡಿದ್ದಾರೆ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇತ್ತೀಚಿಗೆ ಸುರಿದ ರೋಹಿಣಿ ಮಳೆಯಿಂದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರಿಂದ ಹೊಲ ಹದಗೊಳಿಸುವುದು ಬಿತ್ತನೆ ಕಾರ್ಯ, ಚುರುಕುಗೊಂಡಿವೆ.

ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ತಾವರಗೇರಾ, ಹನುಮಸಾಗರ, ಹನುಮನಾಳ, ಕೇಸೂರ, ಮುದೇನೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇತ್ತೀಚಿಗೆ ಸುರಿದ ರೋಹಿಣಿ ಮಳೆ ಆಸರೆಯನ್ನಾಗಿಟ್ಟುಕೊಂಡು ಮಳೆಯಿಂದ ಹಸಿಯಲ್ಲೆ ರೈತ ಮುಂದಿನ ಮಳೆಯು ಚೆನ್ನಾಗಿ ಆಗಬಹುದೆಂಬ ವಿಶ್ವಾಸದಿಂದ ಬಿತ್ತನೆ ಪ್ರಾರಂಭ ಮಾಡುತ್ತಿರುವದು ಕಂಡು ಬರುತ್ತಿದೆ.

ಬಿತ್ತನೆಯಲ್ಲಿ ಉತ್ಸಾಹ:

ಆಕಾಶದತ್ತ ಮುಖ ಮಾಡಿ ಕುಳಿತಿದ್ದ ರೈತರಿಗೆ ರೋಹಿಣಿ ಮಳೆ ಸುರಿಯುವ ಮೂಲಕ ಆಶಾವಾದ ಚಿಗುರಿಸಿದ್ದು, ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಿ ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಸಜ್ಜಿ, ಎಳ್ಳು, ಹೆಸರು, ಅಲಸಂದಿ ಸೇರಿದಂತೆ ದವಸ ದಾನ್ಯ ಬಿತ್ತನೆಯಲ್ಲಿ ಉತ್ಸಾಹದಿಂದ ರೈತರು ಪಾಲ್ಗೊಂಡಿದ್ದಾರೆ.

ಪ್ರಮುಖವಾಗಿ ಡೀಸೆಲ್ ಕೊರತೆ, ತೈಲ ಬೆಲೆ ಏರಿಕೆ, ರಸಗೊಬ್ಬರ ರಿಯಾಯಿತಿ ದರದಲ್ಲಿ ಕಡಿತ ಮತ್ತು ಯೂರಿಯಾ ಎಕರೆಗೆ ಒಂದು ಚೀಲಕ್ಕೆ ಸೀಮಿತಗೊಳಿಸಿರುವುದು, ಎಫ್ಐಡಿ ಕಡ್ಡಾಯ ಮಾಡಿರುವದು ಸೇರಿದಂತೆ ಅನೇಕ ಸಮಸ್ಯೆಗಳು ಮುಂಗಾರು ಆರಂಭದಲ್ಲಿ ಕಾಡುತ್ತಿವೆ.

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದವರೆಗೂ ದೊಡ್ಡ, ಮಧ್ಯಮ ಹಿಡುವಳಿದಾರರು ಸ್ವಂತಕ್ಕೆ ಯಂತ್ರ (ಟ್ರ್ಯಾಕ್ಟರ್) ಹೊಂದಿದ್ದರೆ, ಸಣ್ಣ ಹಿಡುವಳಿದಾರರು ಬಾಡಿಗೆ ಪಡೆದು ಸಿದ್ಧತೆ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಡೀಸೆಲ್ ಬೆಲೆ ಏರಿಕೆ ರೈತರಿಗೆ ಹೊರೆಯಾಗಿದೆ. ಜತೆಗೆ ಕಳೆದ ನಾಲ್ಕೈದು ದಿನಗಳಿಂದ ಇಂಧನ ಕೊರತೆ ಪರಿಣಾಮ ಕೃಷಿ ಚಟುವಟಿಕೆ ವಿಳಂಬವಾಗುತ್ತಿದೆ.

ಬಿತ್ತನೆ ಬೀಜ ಬೇಡಿಕೆ: ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ಹನುಮಸಾಗರ, ಹನುಮನಾಳ, ತಾವರಗೇರಾ ಹೋಬಳಿ ವ್ಯಾಪ್ತಿಯ 87871 ಹೆಕ್ಟೇರ್ ಪ್ರದೇಶ ಬಿತ್ತನೆಯ ಗುರಿ ಹೊಂದಲಾಗಿರುವ ಪೈಕಿ ಸಜ್ಜೆ 295 ಕ್ವಿಂಟಲ್, ಅಲಸಂಧಿ 9 ಕ್ವಿಂಟಲ್, ಜೋಳ 2 ಕ್ವಿಂಟಲ್, ಮೆಕ್ಕೆಜೋಳ 1840 ಕ್ವಿಂಟಲ್, ಸೂರ್ಯಕಾಂತಿ 110 ಕ್ವಿಂಟಲ್, ತೊಗರಿ 1110 ಕ್ವಿಂಟಲ್, ನವಣೆ 12ಕ್ವಿಂಟಲ್, ಹೆಸರು 80 ಕ್ವಿಂಟಲ್ ಬೀಜದ ಬೇಡಿಕೆ ಅಗತ್ಯ ತಕ್ಕಂತೆ ದಾಸ್ತಾನು ಇದ್ದು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಿಸುವ ಕಾರ್ಯ ಆರಂಭಿಸಲಾಗಿದ್ದು ರೈತರು ಬಿತ್ತನೆಯ ಬೀಜದ ಖರೀದಿಗೆ ಮುಂದಾಗಿರುವದು ಕಂಡು ಬರುತ್ತಿದೆ.

ಕುಷ್ಟಗಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 87871 ಹೆಕ್ಟೇರ್ ಪ್ರದೇಶ ಬಿತ್ತನೆಯ ಗುರಿ ಹೊಂದಿದೆ. ಇಲಾಖೆಯಿಂದ ಸಕಾಲಕ್ಕೆ ಬಿತ್ತನೆ ಬೀಜ ಮಾರಾಟ ಮಾಡಲು ರೈತ ಸಂಪರ್ಕ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರು ಖಾಸಗಿಯಾಗಿ ಚಿಲ್ಲರೆ ಬೀಜ ಖರೀದಿಸದೇ ಇಲಾಖೆಯಿಂದ ಪ್ರಮಾಣೀಕರಿಸಿದ ಬೀಜ ಖರೀದಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕುಷ್ಟಗಿ ನಾಗರಾಜ ಕಾತರಕಿ ಎಂದರು.

ಮುಂಗಾರು ಹಂಗಾಮಿನಲ್ಲಿ ಮಳೆ ಸುರಿದ ಪರಿಣಾಮ ಬಿತ್ತನೆ ಆರಂಭಿಸಲಾಗಿದ್ದು, ಬೆಲೆ ಏರಿಕೆಯ ಪರಿಣಾಮ ನೇರವಾಗಿ ಕೃಷಿ ಚಟುವಟಿಕೆ ಮೇಲೆ ಬಿದ್ದಂತಾಗಿದೆ. ಟ್ರ್ಯಾಕ್ಟರ ಬಾಡಿಗೆ ಹೆಚ್ಚಾಗಿದೆ, ಎತ್ತುಗಳ ಬಾಡಿಗೆ ಕೂಲಿ ಕಾರ್ಮಿಕರ ಕೂಲಿದರ ಹೆಚ್ಚಳವಾಗಿದ್ದು ಬೆಲೆ ಏರಿಕೆಯಿಂದ ರೈತನ ಪರಿಸ್ಥಿತಿ ಹೇಳತೀರದಾಗಿದೆ ಎಂದು ಗುಮಗೇರಾ ರೈತ ದೊಡ್ಡಪ್ಪ ಚೌಡ್ಕಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಜಾರಿಯಾಗದ ಹೊಸ ಅಬಕಾರಿ ನೀತಿ
ಜೀವರಕ್ಷಕ, ಪ್ರವಾಸಿ ಮಿತ್ರ ಸಿಬ್ಬಂದಿಗೆ ಸನ್ಮಾನ