ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನೀರಾವರಿ ಇಲಾಖೆಯಲ್ಲಿನ ಕಳಪೆ ಕಾಮಗಾರಿ ಮತ್ತು ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಶೀಘ್ರವೇ ರೈತ ಚಳವಳಿ ಸಂಘಟಿಸುವ ಕುರಿತು ರೈತ ಸಂಘದ ಕಾರ್ಯಕರ್ತರು ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಭ್ರಷ್ಟಾಚಾರದ ವಿರುದ್ಧ ರೈತಸಂಘ ನಿರಂತರ ಹೋರಾಟ ನಡೆಸುತ್ತಿದ್ದರೂ ಬೇರುಗಳು ಸಡಿಲಗೊಳ್ಳುತ್ತಿಲ್ಲ. ಸೇನೆಯಲ್ಲಿ ಕೆಲಸ ಮಾಡಿದ್ದ ಲೆಫ್ಟಿನೆಂಟ್ ಕರ್ನಲ್ ಡಾ.ಅಶೋಕ್ ತಹಸೀಲ್ದಾರ್ ಆಗಿದ್ದರೂ ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ತೊಲಗಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ತಾಲೂಕು ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕಡತಗಳು ತಹಸೀಲ್ದಾರರ ಸಹಿಗೆ ಹೋಗುತ್ತಿಲ್ಲ. ಟಪಾಲು ಮೂಲಕ ರೈತರು ಸಲ್ಲಿಸಿದ ಅರ್ಜಿಗಳು ಹಣಕೊಡದಿದ್ದರೆ ಟಪಾಲು ಕೇಂದ್ರದಲ್ಲಿಯೇ ಕೊಳೆಯುತ್ತಿವೆ. ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಆರ್.ಐ ಗಳು ರೈತರ ಸುಲಿಗೆ ಮಾಡುತ್ತಿದ್ದಾರೆ. ಅಕ್ರಮ- ಸಕ್ರಮದಡಿ ರೈತರು ಉಳುಮೆ ಮಾಡುತ್ತಿರುವ ಜಮೀನಿನ ಸಾಗುವಳಿ ಚೀಟಿ ಪಡೆಯಲು ಲಕ್ಷಾಂತರ ರು. ಲಂಚ ನೀಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಮಾವತಿ ಎಡದಂಡೆ ಮುಖ್ಯ ನಾಲೆಯ 54ನೇ ವಿತರಣಾ ನಾಲೆಯ ಆಧುನೀಕರಣ ಸುಮಾರು 60 ಕೋಟಿ ಅಂದಾಜು ವೆಚ್ಚದಲ್ಲಿ ನಡೆಯುತ್ತಿದೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇದರ ವಿರುದ್ಧ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಮುದ್ದುಕುಮಾರ್, ಚೌಡೇನಹಳ್ಳಿ ಕೃಷ್ಣೇಗೌಡ, ಮರಡಹಳ್ಳಿ ರಾಮೇಗೌಡ, ಲಕ್ಷ್ಮೀಪುರ ನಾಗರಾಜು ಸೇರಿ ಹಲವರು ಇದ್ದರು.