ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಮಳೆ ನಂಬಿಕೊಂಡು ಬಿತ್ತನೆ ನಡೆಸಿದ್ದ ರೈತರು ಈಗ ಮಳೆ ಕೈಕೊಟ್ಟ ಪರಿಣಾಮ ಸಂಕಷ್ಟದ ದಿನ ಎದುರಿಸುತ್ತಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜೋಳ, ತೊಗರಿ, ಹತ್ತಿ, ಹೆಸರು, ಎಳ್ಳು, ಸೂರ್ಯಕಾಂತಿ, ಉದ್ದು, ಸಜ್ಜೆ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಮಾಡಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಮಳೆಯಾಗದ ಕಾರಣ ಹೊಲಗಳಲ್ಲಿನ ತೇವಾಂಶ ಕಡಿಮೆಯಾಗಿ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡತೊಡಗಿವೆ. ಇನ್ನೂ ಕೆಲವೇ ದಿನಗಳಲ್ಲಿ ಮಳೆ ಸುರಿಯದಿದ್ದರೆ ಬೆಳೆಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಂಡು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.ರೈತರು ಸಾವಿರಾರು ಕೋಟಿ ರು. ಸಾಲ ಮಾಡಿ ಬೀಜ, ಗೊಬ್ಬರ ಮತ್ತು ಕೃಷಿ ಕಾರ್ಯಗಳಿಗೆ ಹಣ ವೆಚ್ಚ ಮಾಡಿದ್ದಾರೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಆರಂಭಿಸಿದ್ದ ಕೃಷಿ ಈಗ ಅನಿಶ್ಚಿತತೆಯ ಅಂಚಿಗೆ ತಲುಪಿದೆ. ಹೊಲಕ್ಕೆ ಹೋದಾಗ ಹಸಿರಾಗಿರಬೇಕಿದ್ದ ಬೆಳೆಗಳು ಬಾಡುತ್ತಿರುವ ದೃಶ್ಯ ರೈತರ ಆತಂಕ ಇನ್ನಷ್ಟು ಹೆಚ್ಚಿಸಿದೆ.
ಮಳೆಯ ಕೊರತೆ ಮುಂದುವರಿದರೆ ಬೆಳೆ ನಷ್ಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಬೆಳೆ ಸಮೀಕ್ಷೆ ನಡೆಸಿ ಅಗತ್ಯವಿದ್ದರೆ ಮಧ್ಯಂತರ ಪರಿಹಾರ ಘೋಷಿಸಬೇಕು ಮರುಬಿತ್ತನೆ ಅಗತ್ಯವಾದರೆ ಗುಣಮಟ್ಟದ ಬೀಜ ಮತ್ತು ಇತರೆ ಕೃಷಿ ಸಾಮಗ್ರಿ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರತಿ ದಿನ ಬೆಳಗ್ಗೆ ಎದ್ದಾಕ್ಷಣ ಆಕಾಶದತ್ತ ನೋಡುತ್ತೇವೆ, ಮೋಡ ಕಂಡರೆ ಆಸೆ ಬಿಸಿಲು ಕಂಡರೆ ನಿರಾಸೆ ಮಳೆಯೊಂದೇ ನಮ್ಮ ಬೆಳೆ ಮತ್ತು ಬದುಕಿನ ಆಸರೆಯಾಗಿದ್ದು ಎರಡು ಮೂರು ದಿನಗಳಲ್ಲಿ ಮಳೆ ಸುರಿದರೆ ರೈತನ ಬದುಕು ಹಸಿರಾಗಲಿದೆ ಎಂದು ದೋಟಿಹಾಳ ಗ್ರಾಮದ ರೈತ ಮಹಿಳೆ ಹನಮವ್ವ ಚೌರಿ ತಿಳಿಸಿದ್ದಾರೆ.