ಕನ್ನಡಪ್ರಭ ವಾರ್ತೆ ಪಾವಗಡ
ಕಂದಾಯ ಇಲಾಖೆಯ ಸಾರ್ವಜನಿಕ ಕೆಲಸ ಕಾರ್ಯ ವಿಳಂಬ ಹಾಗೂ ಲಂಚ ನೀಡುವುದನ್ನು ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ವಿನಾಕಾರಣ ರೈತರ ಕೆಲಸಗಳನ್ನು ತಡೆಹಿಡಿಯಲಾಗುತ್ತಿದೆ. ಕೆಲ ಅಧಿಕಾರಿಗಳು ಪಾನಮತ್ತರಾಗಿ ಕೆಲಸಕ್ಕೆ ಬರುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಹಳ್ಳಿಗಳ ರೈತರು ಪ್ರತಿ ದಿನ ಕಚೇರಿಗಳನ್ನು ಅಲೆಯುವಂತಾಗಿದೆ. ಈ ಕೂಡಲೇ ಇದನ್ನು ಸರಿಪಡಿಸಿಕೊಳ್ಳದಿದ್ದರೆ ಎಲ್ಲಾ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ತಾಲೂಕಿನಲ್ಲಿ 34 ದೊಡ್ಡಕೆರೆಗಳಿದ್ದು, ಪುರಾತನ ಕಾಲದಿಂದಲೂ ಕೆರೆಗಳಿಗೆ ನೀರು ಬಂದು ಹೂಳು ತುಂಬಿರುತ್ತದೆ. ಈ ಕೆರೆಗಳ ತೂಬುಗಳು ಮತ್ತು ಕೆರೆ ಕಟ್ಟೆ ಶಿಥಿಲ ವ್ಯವಸ್ಥೆಯಲ್ಲಿ ಇರುತ್ತದೆ. ಕೆರೆ ತೂಬುಗಳು ದುರಸ್ತಿಗೊಳಿಸಿ ಹೂಳು ತೆಗೆಯಬೇಕು. ಯೋಜನೆ ಪ್ರಗತಿಯಲ್ಲಿದ್ದು ತಾಲೂಕಿನ 34 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಸರಬರಾಜು ಮಾಡಬೇಕು. ಕೆರೆಗಳಲ್ಲಿ ತುಂಬಿರುವುದು ಮಣ್ಣು 3-ರಿಂದ 4 ಅಡಿ ವರೆಗೆ ಹೂಳು ತೆಗೆಯಬೇಕು. ಕೆರೆ ಅಂಗಳದಲ್ಲಿ ಬೆಳೆದಿರುವ ಕುರುಚಲು ಗಿಡ ಮತ್ತು ಮರಗಿಡಗಳನ್ನು ತೆರೆವು ಸೇರಿದಂತೆ ರೈತ ಹಾಗೂ ಸಾರ್ವಜನಿಕರು ಮನೆಗಳನ್ನು ಕಟ್ಟಿಕೊಳ್ಳಲು ಎತ್ತಿನ ಗಾಡಿಯಲ್ಲಿ ಮಣ್ಣು ಮತ್ತು ಮರಳು ಸಾಗಾಣಿಕೆ ಮಾಡಲು ಗ್ರಾಪಂ ಪಿಡಿಒಗಳಿಗೆ ಅನುಮತಿ ಆದೇಶ ನೀಡುವಂತೆ ಒತ್ತಾಯಿಸಿದರು.
ತಾಲೂಕಿನ ಐವಾರಹಳ್ಳಿ,ಕಾಮನದುರ್ಗ,ನಿಡಗಲ್ ಹೋಬಳಿ ಗೊಲ್ಲನಕುಂಟೆ,ಹಾಗೂ ಕಸಬಾ ಹೋಬಳಿ ಕಣಿವೇನಹಳ್ಳಿ ಗ್ರಾಮ ಸೇರಿ ಒಟ್ಟು 50ಕ್ಕಿಂತ ಹೆಚ್ಚು ಮಂದಿ ತಾಲೂಕಿನ ಬಡ ರೈತರು ಬಗರ್ ಹುಕ್ಕಂ ನಲ್ಲಿ ಅರ್ಜಿ ಸಲ್ಲಿಸಿದ್ದು ದಾಖಲೆ ಸರಿಯಿದ್ದರೂ ಇದುವರೆವಿಗೂ ಸಾಗುವಳಿ ಮಂಜೂರಾತಿ ಪತ್ರ ನೀಡಿಲ್ಲ. ಅರ್ಜಿ ಸಲ್ಲಿಸಿರುವ 4 ಹೋಬಳಿ ಬಡವರಿಗೆ ತಕ್ಷಣವೇ ಜಮೀನು ಮುಂಜೂರು ಮಾಡಿಸಿಕೊಡಬೇಕು. ಇಲ್ಲದಿದ್ದಲ್ಲಿ ದಲಿತ ಪರ ಸಂಘಟನೆಗಳು ಸೇರಿ ತಾಲೂಕು ಕಚೇರಿಯ ಬಳಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದರು.ಸಂಘಟನೆಯ ತಾಲೂಕು ಸಿಐಟಿ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಅಧಿಕಾರಿಗಳ ಲಂಚ ಪಡೆಯುವುದು ಸೂಕ್ತವಲ್ಲ.ದಾಖಲೆ ಸರಿ ಇದ್ದರೆ ಕೂಡಲೇ ಕೆಲಸ ಮಾಡಿಕೊಡಬೇಕು. ಬಗರ್ ಹುಕ್ಕಂ ನಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಕೂಡಲೇ ಸಾಗುವಳಿ ಮಂಜುರಾತಿ ಪತ್ರ ನೀಡುವಂತೆ ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ,ಶಿವು,ಜಿಲ್ಲಾ ಕಾರ್ಯದರ್ಶಿ ದಂಡುಪಾಳ್ಯದ ರಾಮಾಂಜಿನಪ್ಪ,ರಮೇಶ್,ಗೋವಿಂದಪ್ಪ,ಜಿಲ್ಲಾ ಉಪಾಧ್ಯಕ್ಷ ಹನುಮಂತರಾಯಪ್ಪ,ತಾಲೂಕು ಕಾರ್ಯದರ್ಶಿ ನರಸಪ್ಪ,ಪೂಜಾರಿ ಚಿತ್ತಯ್ಯ, ಪಾಲನಾಯಕ ಗುಡಿಪಲ್ಲಪ್ಪ,ಸದಾಶಿವಪ್ಪ,ಶ್ರೀರಾಮಪ್ಪ ಬೋರಣ್ಣ,ನಾಗಪ್ಪ ಹೊಸಕೋಟೆ ಗೋಪಾಲ್,ಪ್ರಸಾದ್ ,ಕೃಷ್ಣಪ್ಪ,ರಾಮಚಂದ್ರಪ್ಪ ಇತರೆ ಅನೇಕ ಮಂದಿ ರೈತ ಮುಖಂಡರು ಪ್ರತಿಭಟನೆಯಲ್ಲಿ ಇದ್ದರು.