ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಅರಣ್ಯದಲ್ಲಿ ಯಾರು ವಾಸ ಮಾಡುತ್ತಿದ್ದಾರೆ, ಯಾರು ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ ಅವರಿಗೆ ತೊಂದರೆ ಕೊಡುವ ಕೆಲಸವನ್ನು, ಅಲ್ಲಿಂದ ಹೊರ ಹಾಕುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುವುದಿಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕೇಂದ್ರ ಸರ್ಕಾರ, ನಮ್ಮ ಸರ್ಕಾರ ಕೇವಲ ಪಂಗಡದವರಿಗೆ (ಎಸ್.ಟಿ.) ಒಂದು ಕಾನೂನು ಮಾಡಿದ್ದು ಅದರಲ್ಲಿ ಅವರಿಗೆ ೨೫ ವರ್ಷದಿಂದ ಅರಣ್ಯದಲ್ಲಿ ಇರುವವರಿಗೆ ಜಮೀನು ಕೊಡಬಹುದೆಂಬ ಕಾನೂನು ಇದೆ. ಇದರಿಂದ ತಾರತಮ್ಯ ಮಾಡಲಾಗಿದೆ ಎಂದು ಬೇರೆಯವರಿಂದ ಬೇಡಿಕೆ ಇದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ಅದರಂತೆ ಪರಿಶಿಷ್ಟ ಪಂಗಡದವರಿಗೆ ಇರುವ ಕಾನೂನಿನಂತೆ ಬೇರೆ ಜನಾಂಗದವರೂ ರೈತರೇ ಅವರಿಗೂ ರಕ್ಷಣೆ ಕೊಡಬೇಕೆಂದು ರಾಜ್ಯದಲ್ಲಿ ಕಾನೂನು ತಿದ್ದುಪಡಿ ಮಾಡಿ ಅದನ್ನು ದೆಹಲಿಗೆ ಕಳುಹಿಸಿಕೊಡಲಾಗುವುದು. ಮುಂದೆ ದೆಹಲಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದರು.
ರೈತರ ಬೇಡಿಕೆಯಂತೆ ನಂದಿನಿ ಹಾಲಿನ ಬೆಲೆ ಹೆಚ್ಚಳ: ಹುಲ್ಲಿನ ಬೆಲೆ, ದಿನಸಿ ಬೆಲೆಗಳೆಲ್ಲ ಜಾಸ್ತಿ ಆಗಿದ್ದು, ರೈತರಿಗೂ ತೊಂದರೆಯಾಗಿತ್ತು. ನೀರಿನ ಬೆಲೆಯೂ ಜಾಸ್ತಿ ಆಗಿದೆ. ರೈತರಿಗೆ ಸಿಗುವ ಹಾಲಿನ ಬೆಲೆ ಕಡಿಮೆಯಾಗಿತ್ತು, ರೈತರ ಒತ್ತಾಯದ ಮೇಲೆ ಹಾಲಿನ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಚರ್ಚೆಗೆ ಕುರಿತ ಪತ್ರಕರ್ತರ ಪ್ರಶ್ನೆಗೆ ಇನ್ನೊಮ್ಮೆ ಮಾತನಾಡೋಣ ಎಂದಷ್ಟೇ ನಗುತ್ತಾ ಉತ್ತರಿಸಿದರು. ನನ್ನ ಕುಟುಂಬ ಸಮೇತ ಕುಕ್ಕೆಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಎಲ್ಲರ ಶಾಂತಿ ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಮಳೆ ಕಡಿಮೆ ಆಗಿದ್ದು ನೀರಿನ ಸಮಸ್ಯೆ ಆಗಿದೆ. ಮಳೆ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಮಳೆ ಈಗಷ್ಟೇ ಪ್ರಾರಂಭ ಆಗಿದೆ. ಡ್ಯಾಂಗಳಲ್ಲಿ ಜಾಸ್ತಿ ನೀರು ಬರಲು ಪ್ರಾರಂಭ ಆಗಿದೆ. ಸಂಪೂರ್ಣ ಮಳೆ ಇನ್ನೂ ಆರಂಭವಾಗಿಲ್ಲ. ತಮಿಳುನಾಡಿನವರು ಈಗಲೇ ನಮ್ಮಲ್ಲಿ ನೀರು ಬಿಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರಿಸಿದರು.
ಸುಸಜ್ಜಿತ ಆಸ್ಪತ್ರೆಗೆ ಪ್ರಯತ್ನ: ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಚರ್ಚಿಸುತ್ತೇವೆ, ಬೇಡಿಕೆ ಈಡೇರಿಸಲು ಪರಿಶೀಲಿಸುತ್ತೇವೆ ಎಂದರು. ಪ್ರಜ್ವಲ್ ಪ್ರಕರಣ: ಪ್ರಜ್ವಲ್ ರೇವಣ್ಣ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ಪ್ರೀತಂ ಗೌಡ ವಿರುದ್ಧ ಎಫ್‌ಐಆರ್ ದಾಖಲು ವಿಚಾರದ ಮಾಧ್ಯಮ ಪ್ರಶ್ನೆಗೆ ಬಿಜೆಪಿಯ ಪ್ರೀತಂ ಗೌಡ ಮೇಲೆ ವಿಡಿಯೋ ವೈರಲ್ ಸಂಬಂಧ ಪ್ರಕರಣ ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮುಂಜಾನೆ ಮಂಗಳೂರಿನಿಂದ ಹೊರಟು ಸುಬ್ರಹ್ಮಣ್ಯದವರೆಗೆ ಕಾರಿನಲ್ಲಿ ಮಲಗಿಕೊಂಡೆ ಬಂದಿದ್ದೀನಿ. ನನಗೆ ಯಾರೂ ಇಲ್ಲಿವರೆಗೆ ಈ ವಿಚಾರ ತಿಳಿಸಿಲ್ಲ ನನಗೆ ಏನೂ ಗೊತ್ತಿಲ್ಲ ಎಂದು ಪ್ರತಿಕಿಯಿಸಿದರು.ಚನ್ನಪಟ್ಟಣ ಉಪಚುನಾವಣೆ ಕುರಿತು ಜನ ಮತ್ತು ಪಕ್ಷ ಏನು ತೀರ್ಮಾನ ಮಾಡುತ್ತೆ ನೋಡಣ. ಮತದಾರರು ಏನು ಹೇಳುತ್ತಾರೆ ಪಕ್ಷ ಅದನ್ನ ಕೇಳುತ್ತೆ ಎಂದು ಉತ್ತರಿಸಿದರು. ಶಕ್ತಿ ಯೋಜನೆಯಡಿ ಪ್ರಯಾಣಿಕರಿಗೆ ಪ್ರಯೋಜನವಾಗಿದೆ ಎಂದ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಸ್ ಡಿಪೋ ಬೇಡಿಕೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದರು.