ನೀರಿನಿಂದ ಮುಳುಗಡೆ ಆಗದ ಗ್ರಾಮಗಳನ್ನು ಆರೋಗ್ಯ ಮತ್ತು ಶೀತಲ ಪ್ರದೇಶವೆಂದು ಪ್ರಸ್ತಾಪಿಸಿ ಪುನರ್ವಸತಿ ಗ್ರಾಮಗಳ ಮಂಜೂರಾತಿ ಮಾಡಿಸಲಾಯಿತು
ಕುಕನೂರು: ಮೊದಲು ಕೆ.ಎಚ್. ಪಾಟೀಲ್ ತಾಲೂಕಿನ ಅರಕೇರಿ ಗ್ರಾಮಕ್ಕೆ ಹಿರೇಹಳ್ಳ ಜಲಾಶಯದಿಂದ ಮುಳುಗಡೆ ಗ್ರಾಮವೆಂದು ಸವಕಳಿ ಹಣ ನೀಡಿದರು. ಆನಂತರ ಅವರ ಮಗ ಎಚ್.ಕೆ. ಪಾಟೀಲ್ ಅವರಿಂದ ಇನ್ನೂ ಮೂರು ಗ್ರಾಮಕ್ಕೆ ಪುನರ್ವಸತಿ ಸೌಲಭ್ಯ ಸಿಕ್ಕಿತು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಶಿರೂರು ಗ್ರಾಮದಲ್ಲಿ ಜರುಗಿದ ಕೆ.ಎಚ್. ಪಾಟೀಲ್ ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, 2 ಟಿಎಂಸಿ ನೀರು ಸಂಗ್ರಹವಾಗುವ ಸ್ಥಳೀಯ ಹಿರೇಹಳ್ಳ ಡ್ಯಾಂ ಕಟ್ಟಲು ರಾಮಕೃಷ್ಣ ಹೆಗಡೆ ಅನುಮೋದನೆ ನೀಡಿದರು. ತಾಲೂಕಿನ ಅರಕೇರಿ ಗ್ರಾಮ ಆ ವೇಳೆ ಮುಳುಗಡೆ ಆಯಿತು. ಆದರೆ ತಾಲೂಕಿನ ಶಿರೂರು, ಮುತ್ತಾಳ, ವೀರಾಪುರ ಗ್ರಾಮಗಳಿಗೆ ಡ್ಯಾಂನ ಹಿನ್ನೀರು ಬರುತ್ತಿರುವುದರಿಂದ ಆರೋಗ್ಯ ದೃಷ್ಟಿ ಹಾಗೂ ಪ್ರವಾಹ ಪೀಡಿತ ಶೀತ ಪ್ರದೇಶವನ್ನಾಗಿ ಘೋಷಣೆ ಮಾಡಲು ಆಗಿನ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಅವರ ಮನೆಗೆ ತೆರಳಿ ಮನವೊಲಿಸಿದಾಗ ಪುನರ್ವಸತಿ ಗ್ರಾಮಗಳ ಘೋಷಣೆ ಆಯಿತು. ನೀರಿನಿಂದ ಮುಳುಗಡೆ ಆಗದ ಗ್ರಾಮಗಳನ್ನು ಆರೋಗ್ಯ ಮತ್ತು ಶೀತಲ ಪ್ರದೇಶವೆಂದು ಪ್ರಸ್ತಾಪಿಸಿ ಪುನರ್ವಸತಿ ಗ್ರಾಮಗಳ ಮಂಜೂರಾತಿ ಮಾಡಿಸಲಾಯಿತು. ಇದರಿಂದ ಸದ್ಯ ಇಲ್ಲಿಯ ಜನರಿಗೆ ಅನುಕೂಲ ಆಗಿದೆ ಎಂದರು.
2004ರಲ್ಲಿ ಅನುದಾನ ಬಿಡುಗಡೆ, ಆನಂತರ 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಾಕಷ್ಟು ಹಣ ಪುನರ್ವಸತಿ ಗ್ರಾಮಕ್ಕೆ ನೀಡಿದರು. ಸದ್ಯ ಸಕಲ ಸವಲತ್ತುಗಳಿಂದ ಪುನರ್ವಸತಿ ಗ್ರಾಮಗಳ ಅಭಿವೃದ್ಧಿ ಆಗಿದೆ. ಇವೆಲ್ಲವಕ್ಕೂ ಕಾರಣ ಎಚ್.ಕೆ. ಪಾಟೀಲ್. ಅದಕ್ಕೆ ಕಾರಣರಾದ ಎಚ್.ಕೆ. ಪಾಟೀಲ್ ಬದಲು ಅವರ ತಂದೆಯವರಾದ ಕೆ.ಎಚ್. ಪಾಟೀಲ್ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅನಾವರಣ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಯಾವುದೇ ಸ್ಕೀಂ ಸಹ ನಿಲ್ಲುವುದಿಲ್ಲ. ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅಭಿವೃದ್ಧಿಗೆ ದಿಕ್ಸೂಚಿ ಆಗಿದ್ದಾರೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.