ಕುಮಟಾದಲ್ಲಿ ಸಂಭ್ರಮದ ದೀಪಾವಳಿ ಆಚರಣೆ

KannadaprabhaNewsNetwork |  
Published : Nov 10, 2026, 01:15 AM IST
ಫೋಟೋ : ೯ಕೆಎಂಟಿ_ಎನ್‌ಒವಿ_ಕೆಪಿ೧ : ವಾಲಗಳ್ಳಿಯಲ್ಲಿ ಹಾಲಕ್ಕಿಗಳಿಂದ ಬೂದೆಗಳವಿನ ಮಂಟಪ.   | Kannada Prabha

ಸಾರಾಂಶ

ವಾಲಗಳ್ಳಿಯಲ್ಲಿ ಹಾಲಕ್ಕಿ ಸಮಾಜದವರು ಬೂದೆಗಳವಿನ ಆಚರಣೆಯನ್ನು ಅತ್ಯಂತ ಸಾಂಪ್ರದಾಯಿಕ ಶ್ರದ್ಧೆಯಿಂದ ನೆರವೇರಿಸಿದ್ದಾರೆ.

ಕುಮಟಾ: ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆಯ ವಿಜಯದ ಸಂಕೇತವಾಗಿ ದೀಪಾವಳಿ ಹಬ್ಬವನ್ನು ತಾಲೂಕಿನಾದ್ಯಂತ ಅತ್ಯಂತ ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗಿದ್ದು, ಹಬ್ಬದ ವಿಶೇಷ ಕಳೆ ಮನೆಮನೆಗಳಲ್ಲೂ ನೂರ್ಮಡಿಸಿದೆ.

ತಾಲೂಕಿನ ವಾಲಗಳ್ಳಿಯಲ್ಲಿ ಹಾಲಕ್ಕಿ ಸಮಾಜದವರು ಬೂದೆಗಳವಿನ ಆಚರಣೆಯನ್ನು ಅತ್ಯಂತ ಸಾಂಪ್ರದಾಯಿಕ ಶ್ರದ್ಧೆಯಿಂದ ಆಚರಿಸಿದ್ದಾರೆ. ವಾಲಗಳ್ಳಿಯ ಅಂಗಡಿಸಾಲಿನಲ್ಲಿ ಗ್ರಾಮಸ್ಥರಿಂದ ಸಂಗ್ರಹಿಸಿದ ಕೃಷಿ ಉತ್ಪನ್ನಗಳನ್ನು ಬಳಸಿ ಬೃಹತ್ ಮಂಟಪ ಸಿದ್ಧಪಡಿಸಿ, ಪೂಜೆ ಸಮರ್ಪಿಸಿದ್ದಾರೆ.

ಹಬ್ಬದ ಕೊನೆಯಲ್ಲಿ ಬೂದೆ ಮಂಟಪವನ್ನು ವಿಸರ್ಜಿಸಿ ಹರಾಜು ಹಾಕಲಾಗುತ್ತದೆ. ಇದೇ ರೀತಿ ಪಟ್ಟಣದ ಗ್ರಾಮದೇವಿಗೆ ಪೂಜೆ ಸಲ್ಲಿಸಿದ ಕೋಮಾರಪಂಥ, ಹಾಲಕ್ಕಿ ಹಾಗೂ ನಾಮಧಾರಿ ಸಮಾಜದವರು ಹೊಂಡೆಯಾಟದ ಸಂಪ್ರದಾಯವನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಿದ್ದಾರೆ. ಅಂತೆಯೇ ಸೂಲಗಾಯಿ ಆಟವನ್ನೂ ಗ್ರಾಮೀಣ ಭಾಗಗಳಲ್ಲಿ ಯುವಜನತೆ ಹಿರಿಯರೊಡಗೂಡಿ ಆಟವಾಡಿ ಸಂಭ್ರಮಿಸಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ನೀರು ತುಂಬಿಸುವುದು, ಗಂಗಾಪೂಜೆ, ತೈಲಾಭ್ಯಂಗ ನಡೆಯಿತು. ಭಾನುವಾರದಂದು ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರು ತಮ್ಮ ಕಚೇರಿ ಮತ್ತು ಮನೆಗಳಲ್ಲಿ ಲಕ್ಷ್ಮೀ ಪೂಜೆಯನ್ನು ಅತ್ಯಂತ ವೈಭವದಿಂದ ನೆರವೇರಿಸಿದರು. ಮಾರುಕಟ್ಟೆಗಳು ಹೂವು, ಹಣ್ಣು, ಮತ್ತು ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿದ್ದವು.

ದೀಪಾಲಂಕಾರದಿಂದ ಪಟ್ಟಣ ಮತ್ತು ಹಳ್ಳಿಗಳು ಕಂಗೊಳಿಸಿದವು. ಪ್ರತಿಯೊಂದು ಮನೆಯ ಮುಂಭಾಗದಲ್ಲಿ ಮಣ್ಣಿನ ಹಣತೆಗಳು, ಮೇಣದ ಬತ್ತಿಗಳು, ಬಣ್ಣಬಣ್ಣದ ಆಕಾಶಬುಟ್ಟಿಗಳು, ವಿದ್ಯುದ್ದೀಪಾಲಂಕಾರ ಮತ್ತು ಎಲ್‌ಇಡಿ ದೀಪಗಳ ಬೆಳಕು ಜಗಮಗಿಸುತ್ತಿತ್ತು. ಪಟ್ಟಣದ ಪ್ರಮುಖ ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳು ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ನವವಧುವಿನಂತೆ ಶೃಂಗರಿಸಲಾಗಿತ್ತು.

ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಭಾರಿ ಜನದಟ್ಟಣೆ ಮುಂದುವರಿದಿದೆ. ಜನರು ಹೊಸ ಬಟ್ಟೆಗಳನ್ನು ಧರಿಸಿ, ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ಸಿಹಿ ಪದಾರ್ಥಗಳನ್ನು ಹಾಗೂ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ