ಬ್ಯಾಡಗಿ: ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸುವ ಮುನ್ನ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸೇರಿದಂತೆ ಸ್ಥಳೀಯ ತಾಲೂಕು ದಂಡಾಧಿಕಾರಿಗಳಿಂದ ಪೂರ್ವಾನುಮತಿ ಕಡ್ಡಾಯ ಎಂದು ಪಿಎಸ್‌ಐ ಭಾರತಿ ಕುರಿ ಸೂಚನೆ ನೀಡಿದರು.
ಹಬ್ಬದ ಸಂದರ್ಭದಲ್ಲಿ ಹೋರಿಗಳಿಗೆ ಪ್ರಚೋದಿಸುವುದು, ಅನಗತ್ಯವಾಗಿ ಹಿಂಸೆ ನೀಡುವುದು, ನೋವುಂಟು ಮಾಡುವ ರೀತಿಯಲ್ಲಿ ವರ್ತಿಸುವುದು ಹಾಗೂ ಸಾರ್ವಜನಿಕರು ಮತ್ತು ಪ್ರಾಣಿಗಳ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿಳಿಸಿದರು.
ಸುರಕ್ಷತಾ ಕ್ರಮಗಳು ಬೇಕು: ಸ್ಪರ್ಧೆಯ ವೇಳೆ ಸಾರ್ವಜನಿಕರ ಸುರಕ್ಷತೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸದಂತೆ ಆಯೋಜಕರು ವಿಶೇಷ ಕಾಳಜಿ ವಹಿಸಬೇಕು ಎಂದು ಸೂಚಿಸಿದರು.ಕಾನೂನು ಗೌರವಿಸಿ: ಸಂಪ್ರದಾಯ ಮತ್ತು ಸಂಭ್ರಮದ ಜೊತೆಗೆ ಪ್ರಾಣಿಗಳ ಹಿತಾಸಕ್ತಿ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನೂ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ಹಬ್ಬದ ಸಂಭ್ರಮದ ಹೆಸರಿನಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ. ಅನುಮತಿ ಪಡೆಯದೇ ಹೋರಿ ಹಬ್ಬ ಅಥವಾ ಸ್ಪರ್ಧೆ ಆಯೋಜಿಸುವುದು ಹಾಗೂ ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಸಂಬಂಧಪಟ್ಟ ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಪಿಎಸ್‌ಐ ಎನ್.ಕೆ. ನಿಂಗೇನಹಳ್ಳಿ, ಎಎಸ್‌ಐ ಸಿ.ಎಂ.ಹುಡೇದ ಪೊಲೀಸ್ ಪೇದೆಗಳಾದ ಹನುಮಂತ ಬೆಳಕೇರಿ, ವಿಜಯ ದೇಸಾಯಿ, ಎಂ.ಜೆ.ಬಚ್ಚೆಗೌಡ್ರ, ಬಸವರಾಜ ಕೆಂಚನಗೌಡ್ರ ಸೇರಿದಂತೆ ಹಲವರು ಉಪಸ್ಥಿತದ್ದರು.