ಸೋಮರಡ್ಡಿ ಅಳವಂಡಿ ಕೊಪ್ಪಳ
ಕೃಷಿ ಇಲಾಖೆಯಿಂದ ಕೊಡಮಾಡುವ ಸಬ್ಸಿಡಿ ದುರ್ಬಳಕೆ ಮತ್ತು ಬೋಗಸ್ ಬಿಲ್ ಸೃಷ್ಟಿ ಹಾಗೂ ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯಸರ್ಕಾರ ಈಗ ರೈತರಿಗೆ ಎಫ್ ಐಡಿ ಮೂಲಕವೇ ಎಲ್ಲವನ್ನು ವಿತರಣೆ ಮಾಡಲು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಲಾಗಿದ್ದು. ಎಫ್ ಐಡಿ ಇಲ್ಲದ ರೈತರಿಗೆ ಇನ್ಮುಂದೆ ಸರ್ಕಾರದ ಯಾವ ಸೌಲಭ್ಯ ನೀಡದಿರಲು ನಿರ್ಧರಿಸಲಾಗಿದೆ.ಅದರ ಭಾಗವಾಗಿ ಈಗ ರಾಜ್ಯಾದ್ಯಂತ ಎಫ್ ಐಡಿ ಮಾಡಿಸುವ ಅಭಿಯಾನ ಪ್ರಾರಂಭಿಸಿದ್ದು, ಎಫ್ ಐಡಿ ಮಾಡಿದರಷ್ಟೇ ಸಾಲದು, ರೈತರು ಇನ್ಮುಂದೆ ಅದಕ್ಕೆ ತಮ್ಮ ಹೆಸರಿನಲ್ಲಿರುವ ಅಷ್ಟೂ ಭೂಮಿ ಜೋಡಿಸಬೇಕು. ಇದರ ಆಧಾರದಲ್ಲಿಯೇ ಕೃಷಿ ಇಲಾಖೆಯ ವೆಬ್ ಸೈಟ್ ನಲ್ಲಿ ಬೆಳೆ ಅಪ್ಲೋಡ್ ಮಾಡಿದ್ದನ್ನು ಆಧರಿಸಿ ರೈತರಿಗೆ ಅಗತ್ಯ ರಸಗೊಬ್ಬರ ಮತ್ತು ಬೀಜ ಹಾಗೂ ಇತರೆ ಸಬ್ಸಿಡಿ ಪರಿಕರ ನೀಡಲಾಗುತ್ತದೆ.
ರಸಗೊಬ್ಬರ ಮತ್ತು ಬೀಜ ಮಾರಾಟಗಾರರು ಸಹ ರೈತರ ಎಫ್ ಐಡಿಯಲ್ಲಿ ನೊಂದಾಯಿಸಿಯೇ ಮಾರಾಟ ಮಾಡಬೇಕು. ಈ ಹಿಂದೆ ಆಧಾರ ಕಾರ್ಡ್ ಆಧಾರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ರೈತರ ಹೆಸರಿನಲ್ಲಿ ಇರುವ ಆಧಾರ ಕಾರ್ಡ್ ಬಳಕೆ ಮಾಡಿಕೊಂಡು ರೈತರು ರಸಗೊಬ್ಬರ,ಬೀಜ ಸೇರಿದಂತೆ ಸರ್ಕಾರದಿಂದ ಕೊಡಮಾಡುವ ಎಲ್ಲ ಸೌಲಭ್ಯ ಪಡೆಯುತ್ತಿದ್ದರು. ಆದರೆ, ಇನ್ಮುಂದೆ ಇದಕ್ಕೆ ಬ್ರೇಕ್ ಹಾಕಲಾಗಿದ್ದು, ಎಫ್ ಐಡಿ ಹೊಂದುವುದು ಕಡ್ಡಾಯ ಮತ್ತು ಅದಕ್ಕೆ ಅವರ ಹೆಸರಿನಲ್ಲಿರುವ ಭೂಮಿ ಜೋಡಿಸುವುದು ಕಡ್ಡಾಯ. ಹೀಗಾಗಿ, ರೈತರು ಎಫ್ ಐಡಿ ಇಲ್ಲದ ಹೊರತು ಏನೂ ಪಡೆಯಲು ಸಾಧ್ಯವಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಯ ಮೂಲಕ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ.
ರಾಜ್ಯಾದ್ಯಂತ ಈಗಾಗಲೇ 1 ಕೋಟಿ ರೈತರು ನೋಂದಣಿಯಾಗಿದ್ದಾರೆ. ಎಫ್ ಐಡಿ ಪಡೆದಿದ್ದಾರೆ. ಆದರೆ, ಇವರೆಲ್ಲರೂ ಸಹ ಭೂಮಿ ಹೊಂದಿರುವ ರೈತರೇ ಎಂದೇ ಅಲ್ಲ, ಇತರೆ ಉಪಕಸಬು ಮಾಡುವವರು ಇದ್ದಾರೆ. ದುರ್ಬಳಕೆಗೂ ಬ್ರೇಕ್:
ಕೇಂದ್ರದ ಕಟ್ಟುನಿಟ್ಟಿನ ಸೂಚನೆ:ರೈತರ ಹೆಸರಿನಲ್ಲಿ ರಸಗೊಬ್ಬರ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಕೇಂದ್ರ ಸರ್ಕಾರ ರೈತರೇ ಎಫ್ ಐಡಿ ಬಳಕೆ ಮಾಡಿ, ರಸಗೊಬ್ಬರ ಪಡೆಯಬೇಕು. ಇದರ ಆಧಾರದಲ್ಲಿಯೇ ರಸಗೊಬ್ಬರ ಹಂಚಿಕೆ ಮಾಡುವುದಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.