ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ತಾಲೂಕಿನ ಒಟ್ಟು 35 ಗ್ರಾಪಂ ವ್ಯಾಪ್ತಿಯ 173 ಗ್ರಾಮಗಳಲ್ಲಿ ಶಾಶ್ವತ ನೀರಿನ ಸೌಲಭ್ಯ ಒದಗಿಸಲು ಕೃಷ್ಣಾ ನದಿಯಿಂದ ಕುಡಿವ ನೀರು ಒದಗಿಸಲು ಬಹುಗ್ರಾಮ ಯೋಜನೆ ಮೂಲಕ ನೀರು ಪೂರೈಸಲಾಗುತ್ತಿದ್ದರೂ ಜೆಜೆಎಂ ಸಮರ್ಪಕ ಅನುಷ್ಠಾನ ಕೊರತೆಯಿಂದ ಗಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಮಾತ್ರ ಇತ್ಯರ್ಥಗೊಂಡಿಲ್ಲ ಬಗೆಹರಿಸುವಂತೆ ಗಡಿಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.
ಸಮಸ್ಯಾತ್ಮಕ ಹಳ್ಳಿಗಳು: ಕುಷ್ಟಗಿ ತಾಲೂಕಿನ ಶಿರಗುಂಪಿ ಗ್ರಾಪಂ ವ್ಯಾಪ್ತಿಯ ರಾ್ಯವಣಕಿ, ಬಿಜಕಲ್ ಗ್ರಾಪಂ ವ್ಯಾಪ್ತಿಯ ಬಿಜಕಲ್, ಕ್ಯಾದಿಗುಪ್ಪ ಗ್ರಾಪಂ ವ್ಯಾಪ್ತಿಯ ಮೆಣಸಗೇರಿ, ಮೆಣಸಗೇರಿ ತಾಂಡಾ, ಕೇಸೂರು ಗ್ರಾಪಂ ವ್ಯಾಪ್ತಿಯ ತೊಣಸಿಹಾಳ, ತೊಣಸಿಹಾಳ ತಾಂಡಾ, ಜಹಗಿರ ಗುಡದೂರು ಗ್ರಾಪಂ ವ್ಯಾಪ್ತಿಯ ಗುಡ್ಡದ ದೇವಲಾಪುರ, ಅಂತರಠಾಣಾ ಗ್ರಾಪಂ ವ್ಯಾಪ್ತಿಯ ಹುಚನೂರು, ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಅಮರಾಪೂರು, ಅಮರಾಪುರ ತಾಂಡಾ, ಕಳಮಳ್ಳಿ, ಕಳಮಳ್ಳಿ ತಾಂಡಾ, ರಾಮಜೀ ನಾಯ್ಕ ತಾಂಡಾ, ಕಿಲ್ಲಾರಹಟ್ಟಿ ತಾಂಡಾ ಸೇರಿ ತಾಲೂಕಿನ 16 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಸಾಧ್ಯತೆ ಇದ್ದು, ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದುಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನೀರಿನ ಸಮಸ್ಯೆ ಕಂಡು ಬಂದರೆ ಗ್ರಾಪಂ ಕರ ವಸೂಲಿ ಹಣ ವಿನಿಯೋಗಿಸಲು ಪಿಡಿಒಗಳಿಗೆ ತಿಳಿಸಲಾಗಿದೆ ಎಂದು ತಾಪಂ ಇಒ ತಿಳಿಸುತ್ತಾರೆ.ತಾಲೂಕಿನಾದ್ಯಂತ ಜೆಜೆಎಂ (ಜಲ ಜೀವನ ಮಿಷನ್) ಅನುಷ್ಠಾನ ಹಿನ್ನೆಲೆಯಲ್ಲಿ ಈ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗಂಭೀರ ನೀರಿನ ಸಮಸ್ಯೆ ಬರದಿರಬಹದು. ಒಂದು ವೇಳೆ ನೀರಿನ ಸಮಸ್ಯೆ ಉದ್ಭವಿಸಿದರೆ ಅಥವಾ ಜೆಜೆಎಂ ನೀರು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾದಲ್ಲಿ ಮುಂಜಾಗ್ರತೆ ಕ್ರಮವಾಗಿ ಆಯಾ ಗ್ರಾಮದಲ್ಲಿರುವ ರೈತರಿಂದ ಕೊಳವೆ ಬಾವಿಯ ನೀರನ್ನು ಬಾಡಿಗೆ ರೂಪದಲ್ಲಿ ಖರೀದಿಸಲು ಯೋಜಿಸಲಾಗಿದೆ. ಮುನ್ನೆಚ್ಚರಿಕೆ ಅರಿತು ಸಮಸ್ಯೆ ಉಲ್ಬಣಿಸಿದ ಕೂಡಲೇ ಬೊರವೆಲ್ ಮೂಲಕ ನೀರು ಪೂರೈಸುವ ಕ್ರಮಕ್ಕೆ ತಾಪಂ ಮುಂದಾಗಿದೆ.
ಕುಷ್ಟಗಿ ತಾಲೂಕಿನಲ್ಲಿ ಜೆಜೆಎಂ ಕೈ ಕೊಟ್ಟಲ್ಲಿ ಮಾತ್ರ ನೀರಿನ ಸಮಸ್ಯೆ ಆಗಲಿದೆ. ತಹಸೀಲ್ದಾರ ಹಾಗೂ ತಾಪಂ ಇಒಗೆ ಸಭೆ ನಡೆಸಲು ಸೂಚನೆ ನೀಡಲಾಗಿದೆ. ಸಮಸ್ಯೆ ಉಂಟಾದಲ್ಲಿ ಟ್ಯಾಂಕರ ಮೂಲಕ ನೀರು ಸರಬರಾಜು ಮಾಡುವಂತೆ ಸೂಚನೆ ನೀಡಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.
ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ಬಾಡಿಗೆ ಬೋರ್‌ವೆಲ್ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವದು. ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಬಿಜಕಲ್ ಗ್ರಾಪಂ ಪಿಡಿಒ ಮಲ್ಲಿಕಾರ್ಜುನಯ್ಯ ಮಳ್ಳಿಮಠ ತಿಳಿಸಿದ್ದಾರೆ.