ಮುನಿರಾಬಾದ: ರಾಜ್ಯ ಸರ್ಕಾರವು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಹಿಂಗಾರು ಬೆಳೆಗೆ ನೀರು ಹರಿಸದಿದ್ದರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಅವರು ಮುನಿರಾಬಾದಿನ ಹೊರ ವಲಯದಲ್ಲಿರುವ ರೆಸಾರ್ಟ್‌ನಲ್ಲಿ ಗುರುವಾರ ಬಳ್ಳಾರಿ ಜಿಲ್ಲೆಯ ಬಿಜೆಪಿ ವಿಭಾಗದಿಂದ ಆಯೋಜಿಸಲಾದ ಅಚ್ಚುಕಟ್ಟು ಪ್ರದೇಶದ ಕೊಪ್ಪಳ, ರಾಯಚೂರ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ರೈತರ ಹಿಂಗಾರು ಬೆಳೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ವಿಷಯದ ಬಗ್ಗೆ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.ಪ್ರಸಕ್ತ ವರ್ಷ ಭಗವಂತನ ಕೃಪೆಯಿಂದ ಉತ್ತಮ ಮಳೆಯಾಗಿದೆ. ತುಂಗಭದ್ರಾ ಜಲಾಶಯಕ್ಕೆ 414 ಟಿಎಂಸಿ ನೀರು ಹರಿದು ಬರುತ್ತದೆ. ಮುಂಗಾರು ಬೆಳೆಗೆ ನೀರು ಬಳಸಿಕೊಂಡ ನಂತರ ಈಗ ಜಲಾಶಯದಲ್ಲಿ 76 ಟಿಎಂಸಿ ಬಾಕಿ ಉಳಿದಿದೆ. ಜಲಾಶಯದ ಗೇಟ್‌ಗಳ ಮೂಲಕ ನದಿಗೆ 241 ಟಿಎಂಸಿ ನೀರನ್ನು ಹರಿ ಬಿಡಲಾಗಿದೆ ಎಂದು ಅಂಕಿ ಅಂಶ ನೀಡಿದರು.
ಜಲಾಶಯದಲ್ಲಿ ಇಷ್ಟೊಂದು ನೀರು ಇರುವಾಗ ಹಿಂಗಾರು ಬೆಳೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾ ಏಕೆ ಮೀನಮೇಷ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ಈಗಾಗಲೇ ಸಿಂಧನೂರು, ಗಂಗಾವತಿ ಹಾಗೂ ಕಾರಟಗಿಯಲ್ಲಿ ರೈತರು ಎರಡನೇ ಬೆಳೆಗೆ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಇದಲ್ಲದೆ ರೈತರು ಹಿಂಗಾರು ಬೆಳೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಬಳ್ಳಾರಿಯಿಂದ ಮುನಿರಾಬಾದವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಅವರ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ರೈತರು ಇಷ್ಟೆಲ್ಲ ಪ್ರತಿಭಟನೆ ಮಾಡಿದರೂ ಸಹ ಸರ್ಕಾರ ಜಾಣ ಕುರುಡನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ತುಂಗಭದ್ರಾ ಜಲಾಶಯದ ಗೇಟ್ ಬದಲಿಸುವ ನೆಪವೊಡ್ಡಿ ರೈತರ ಹಿಂಗಾರು ಬೆಳೆಗೆ ನೀರು ನೀಡಬಾರದು ಎಂದು ತೀರ್ಮಾನಿಸಿದೆ. ಆಗಸ್ಟ್ 2024ರಲ್ಲಿ ತುಂಗಭದ್ರಾ ಜಲಾಶಯದ ಗೇಟ್ ನಂ. 19 ಕಿತ್ತುಕೊಂಡು ಹೋದಾಗ ಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿ ಜೂನ್ 2025ರ ಒಳಗೆ ಜಲಾಶಯದ ಎಲ್ಲ 33 ಗೇಟುಗಳನ್ನು ಬದಲಿಸುವುದಾಗಿ ಭರವಸೆ ನೀಡಿದರು. 15ತಿಂಗಳು ಕಳೆದರೂ ರಾಜ್ಯ ಸರ್ಕಾರಕ್ಕೆ ಇದುವರೆಗೆ ಜಲಾಶಯದ ಒಂದು ಗೇಟ್ ಬದಲಿಸಲು ಸಾಧ್ಯವಾಗಲಿಲ್ಲ ಎಂದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಚ್ಚುಕಟ್ಟು ಪ್ರದೇಶದ ರೈತರ ಬಗ್ಗೆ ಕಾಳಜಿ ಇಲ್ಲ, ಜಲಾಶಯದ ಗೇಟ್ ಬದಲಿಸುವ ವಿಷಯದಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಜಲಾಶಯದ 33ಗೇಟ್ ಬದಲಿಸಲು ಮೂರು ತಿಂಗಳು ಕಾಲಾವಕಾಶ ಸಾಕು ಎಂದಿದ್ದಾರೆ. ಆ ಕೆಲಸ ಪ್ರಸಕ್ತ ಸಾಲಿನ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸರ್ಕಾರ ಯಾಕೆ ಮಾಡಲಿಲ್ಲ ಎಂದು ಶ್ರೀರಾಮುಲು ಪ್ರಶ್ನಿಸಿದರು.ಗುತ್ತಿಗೆದಾರನಿಗೆ ಹಣ ನೀಡದ ಸರ್ಕಾರ:
ಜಲಾಶಯದ 33ಗೇಟ್ ನಿರ್ಮಿಸಲು ₹ 52 ಕೋಟಿ ವೆಚ್ಚವಾಗಲಿದ್ದು. ಗೇಟ್ ನಿರ್ಮಿಸುವ ಗುತ್ತಿಗೆ ಪಡೆದ ಗುತ್ತಿಗೆದಾರ ಇದುವರೆಗೆ 14 ಗೇಟ್ ನಿರ್ಮಿಸಿದ್ದಾರೆ. ಆದರೆ ಸರ್ಕಾರವು ಗುತ್ತಿಗೆದಾರನಿಗೆ ಇದುವರೆಗೂ ಒಂದು ಬಿಡಿ ಕಾಸು ಕೊಟ್ಟಿಲ್ಲ ಇದರಿಂದ ಗೇಟ್ ನಿರ್ಮಾಣದ ಕಾರ್ಯ ವಿಳಂಬವಾಗುತ್ತಿದೆ. ಸರ್ಕಾರಕ್ಕೆ ₹52 ಕೋಟಿ ಯಾವ ಲೆಕ್ಕ. ರಾಜ್ಯ ಸರ್ಕಾರವು ಒಂದು ಕಡೆ ಟೆಂಡರ್ ಕರೆಯುವಲ್ಲಿ ವಿಳಂಬ ಮಾಡಿದೆ. ಇನ್ನೊಂದೆಡೆ ಗುತ್ತಿಗೆದಾರನಿಗೆ ಹಣ ನೀಡದಿರುವುದು ಅಚ್ಚುಕಟ್ಟು ಪ್ರದೇಶದ ರೈತರ ಬಗ್ಗೆ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ರೈತರ ಬಗ್ಗೆ ಸರ್ಕಾರದ ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ ಎಂದರು.ಶುಕ್ರವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ರೈತ ವಿರೋಧಿ ನಿರ್ಧಾರ ಕೈಗೊಂಡರೆ ಮುಂಬರುವ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ರೈತರೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ವಿಪ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಸುರೇಶ್ ಬಾಬು, ಪ್ರತಾಪ್ ಗೌಡ ಪಾಟೀಲ್, ಪರಣ್ಣ ಮುನವಳ್ಳಿ, ಸಹಕಾರಿ ಧುರೀಣ ರಮೇಶ್ ವೈದ್ಯ, ಬಿಜೆಪಿ ಮುಖಂಡ ನವೀನ್ ಕುಮಾರ್ ಗುಳಗಣ್ಣವರ್, ವಿರುಪಾಕ್ಷಪ್ಪ ಸಿಂಗನಾಳ್, ಚಂದ್ರ ನಾಯಕ್, ಶರಣು ತಳ್ಳಿಕೇರಿ, ಪ್ರದೀಪ್ ಹಿಟ್ನಾಳ್ ಹಾಗೂ ಇತರರು ಉಪಸ್ಥಿತರಿದ್ದರು.