ಪಾವಗಡ: ತಾಲೂಕಿನ ರೊಪ್ಪ ಗ್ರಾಪಂನಲ್ಲಿ ಅವ್ಯವಹಾರ ಕುರಿತು ತನಿಖೆಗೆ ಒತ್ತಾಯಿಸಿ ಗ್ರಾಪಂ ಸದಸ್ಯ ಹನುಮಂತರಾಯಪ್ಪ ಆರೋಪದ ವಿಚಾರ ಪತ್ರಿಕೆಯಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ತಾಪಂ ಇಒ ಜಾನಕಿರಾಮ್ ಗ್ರಾಪಂಗೆ ಸೋಮವಾರ ತೆರಳಿ ಪಿಡಿಒ ವಿಜಕುಮಾರ್ ಅವರಿಂದ ಮಾಹಿತಿ ಪಡೆದರು.
ಈ ಸಂಬಂಧ ಸಾಮಗ್ರಿ ಖರೀದಿ ಹೆಸರಿನಲ್ಲಿ ₹50 ಲಕ್ಷ ಅವ್ಯವಹಾರ ಎಂಬ ಶಿರ್ಷಿಕೆಯಲ್ಲಿ ಜು.1ರಂದು ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿತ್ತು. ಇದರ ಬೆನ್ನಲೆ ತಾಪಂ ಇಒ ಜಾನಕಿರಾಮ್ ರೊಪ್ಪ ಗ್ರಾಪಂಗೆ ದೌಡಾಯಿಸಿ ಅವ್ಯವಹಾರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿದರು.
ತಾಪಂ ಇಒ ಜಾನಕಿರಾಮ್ ಮಾತನಾಡಿ, ಗ್ರಾಪಂನ ಅವ್ಯವಹಾರದ ವಿಚಾರವಾಗಿ ಮಾಜಿ ಸಚಿವ ವೆಂಕಟರಮಣಪ್ಪ ಅವರು ಸಮಗ್ರ ಮಾಹಿತಿ ಪಡೆದಿದ್ದಾರೆ. ಸಾಮಗ್ರಿಯ ಹೆಸರಿನಲ್ಲಿ ನಕಲಿ ಬಿಲ್ಲು ಸೃಷ್ಟಿ ಹಾಗೂ ಹಣ ವರ್ಗಾವಣೆ ಬಗ್ಗೆ ಪಿಡಿಒರಿಂದ ಮಾಹಿತಿ ಸಂಗ್ರಹಿಸಿದ್ದು, ಯಾವುದೇ ಯೋಜನೆಯ ಹಣ ಡ್ರಾ ಮಾಡಬೇಕಾದರೆ ಗ್ರಾಪಂ ಸದಸ್ಯರ ಸಭೆಯಲ್ಲಿ ಅನುಮೋದನೆಗೊಳಿಸುತ್ತಾರೆ. ಇಲ್ಲಿ ನಿಯಮನುಸಾರ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿಂದಿನ ಪಿಡಿಒ ರವಿಜಾಮಗೊಂಡ್ಲ ಅವರ ಅವಧಿಯಲ್ಲಿ ನಡೆದ ಭ್ರಷ್ಟಚಾರಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮಕ್ಕೆ ಜಿಪಂ ಸಿಇಒಗೆ ವರದಿ ಸಲ್ಲಿಸಲಾಗುವುದು. ಈಗಿನ ಪಿಡಿಒ ವಿಜಯಕುಮಾರ್ ಅವಧಿಯ ಯೋಜನೆ ಕುರಿತು ತನಿಖೆ ನಡೆಸಲಿದ್ದೇವೆ. ಅವ್ಯವಹಾರ ಕಂಡುಬಂದರೆ ನಿರ್ದಾಕ್ಷ್ಯಣ ಕ್ರಮಕ್ಕೆ ಜಿಪಂಗೆ ಶಿಫಾರಸು ಮಾಡಲಿದ್ದೇವೆ ಎಂದರು.ಗ್ರಾಪಂ ಸದಸ್ಯ ಹನುಮಂತರಾಯಪ್ಪ ಮಾತನಾಡಿ, ಅವ್ಯವಹಾರ ವಿಚಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ತಾಪಂ ಇಒ ಜಾನಕಿರಾಮ್ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಮಗ್ರಿಯ ಅವ್ಯವಹಾರ ತನಿಖೆ ಹಾಗೂ ಈ ಹಿಂದಿನ ಪಿಡಿಒ ರವಿಜಾಮಗೊಂಡ್ಲ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ಸಂತಸ ತಂದಿದೆ ಎಂದರು.