ಅನುದಾನ ತಾರತಮ್ಯದ ವಿರುದ್ಧ ಹೋರಾಟ: ಶಾಸಕ ಕೃಷ್ಣನಾಯ್ಕ

KannadaprabhaNewsNetwork |  
Published : Aug 11, 2025, 12:37 AM IST
ಹೂವಿನಹಡಗಲಿಯ ಕಾಯಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೃಷ್ಣನಾಯ್ಕ | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ನೀರಾವರಿ ಕಾಲುವೆ ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಸರ್ಕಾರ ಬಿಜೆಪಿ ಶಾಸಕರಿಗೆ ಅನುದಾನ ನೀಡುವಲ್ಲಿ ಸಿಎಂ ತಾರತಮ್ಯ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಕ್ಷೇತ್ರದಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ನೀರಾವರಿ ಕಾಲುವೆ ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಸರ್ಕಾರ ಬಿಜೆಪಿ ಶಾಸಕರಿಗೆ ಅನುದಾನ ನೀಡುವಲ್ಲಿ ಸಿಎಂ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಬಾವಿಯ ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡುತ್ತೇವೆಂದು ಶಾಸಕ ಕೃಷ್ಣ ನಾಯ್ಕ ಹೇಳಿದರು.

ಇಲ್ಲಿನ ಕಾಯಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಇಡೀ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ್ದೇನೆ. ಪ್ರತಿ ಹಳ್ಳಿಯಲ್ಲಿ ನೂರೆಂಟು ಸಮಸ್ಯೆಗಳು ಕಣ್ಮುಂದೆ ಕಾಣುತ್ತಿದ್ದರೂ, ಅಭಿವೃದ್ಧಿಗಾಗಿ ಅನುದಾನ ಸಿಗುತ್ತಿಲ್ಲ. ಆದ್ದರಿಂದ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.

ಕ್ಷೇತ್ರದ ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿ ಸೇರಿ 600 ಕಿಮೀ ರಸ್ತೆ ಇದೆ. ಮಳೆಗೆ ಎಲ್ಲ ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿವೆ. ಇದಕ್ಕಾಗಿ ಅಗತ್ಯ ಅನುದಾನ ನೀಡಲು ಈ ಬಾರಿ ಸದನದಲ್ಲಿ ಚರ್ಚಿಸುತ್ತೇನೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ಹಾಗೂ ಜಿಲ್ಲಾ ಖನಿಜ ನಿಧಿ ಅನುದಾನ ತಂದು ಶಾಲಾ-ಕಾಲೇಜು ಕೊಠಡಿಗಳ ನಿರ್ಮಾಣ, ರಸ್ತೆ, ಬೀದಿ ದೀಪಗಳ ಅಳವಡಿಕೆಯ ಕಾಮಗಾರಿ ಆರಂಭಿಸಲಾಗಿದೆ. ಜೆಜೆಎಂ ಯೋಜನೆ 1ನೇ ಹಂತದ ಕಾಮಗಾರಿ ಕಳಪೆಯಾಗಿದೆ. ಉಳಿದಂತೆ ಈಗ ಸುಧಾರಣೆಯಾಗಿದ್ದು ಜನರಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಇನ್ನು ₹10 ಕೋಟಿ ಹಣ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ವಿಜಯನಗರ ಜಿಲ್ಲೆಯಿಂದ 80 ವಿವಿಧ ವೈದ್ಯರು ವರ್ಗವಾಗಿದ್ದಾರೆ. ಆದರೆ ಸರ್ಕಾರ ವೈದ್ಯರನ್ನು ನಮ್ಮ ಕ್ಷೇತ್ರಕ್ಕೆ ನೀಡುತ್ತಿಲ್ಲ. ಲೋಕೋಪಯೋಗಿ ಇಲಾಖೆಯಿಂದ ₹18 ಕೋಟಿ ಅನುದಾನ ಬಂದಿದೆ. ಮೈಲಾರ-ತೋರಣಗಲ್ಲು ಇತರ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೈಪ್‌ಲೈನ್‌ನಿಂದ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ, ಅನೇಕ ಕಡೆಗಳಲ್ಲಿ ಪೈಪ್‌ಲೈನ್‌ ಸೋರಿಕೆಯಿಂದ ನೀರು ಪೋಲಾಗುತ್ತಿದೆ. ದುರಸ್ಥಿಗೆ ಅನುದಾನ ನೀಡುತ್ತಿಲ್ಲ. ಒಟ್ಟಾರೆ ಕ್ಷೇತ್ರಗಳ ಸಮಸ್ಯೆಗಳನ್ನು ಈಗಾಗಲೇ ಪಟ್ಟಿ ಮಾಡಿಕೊಂಡಿದ್ದು, ಎಲ್ಲವನ್ನು ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆದು ಅನುದಾನ ನೀಡುವಂತೆ ಒತ್ತಾಯಿಸುತ್ತೇನೆಂದು ಹೇಳಿದರು.

ಈ ಸಂದರ್ಭ ಬಿಜೆಪಿ ಮಂಡಲದ ಅಧ್ಯಕ್ಷ ಪೂಜಾರ್‌ ಮಲ್ಲಿಕಾರ್ಜುನ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪುರಸಭೆ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಮುಖಂಡ ಹಣ್ಣಿ ಶಶಿಧರ, ಕೆ.ಪತ್ರೇಶ, ವಾರದ್‌ ಗೌಸ್‌ ಮೋಹಿದ್ದೀನ್‌, ಎಂ.ಪರಮೇಶ್ವರಪ್ಪ, ಕೆ.ಪುತ್ರೇಶ ಸೇರಿದಂತೆ ಇತರರಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ