ಹಾವೇರಿ ವಿವಿ ಉಳಿವಿಗಾಗಿ ಹೋರಾಟ ತೀವ್ರ: ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ

KannadaprabhaNewsNetwork |  
Published : Mar 25, 2025, 12:48 AM IST
24ಎಚ್‌ವಿಆರ್‌6 | Kannada Prabha

ಸಾರಾಂಶ

ರಾಜ್ಯ ಸರ್ಕಾರವೇ ಮಂಜೂರು ಮಾಡಿರುವ ವಿಶ್ವವಿದ್ಯಾಲಯವನ್ನು ಮತ್ತೆ ಎರಡು ವರ್ಷದ ನಂತರ ಮುಚ್ಚುವುದು ಅಥವಾ ವಿಲೀನ ಮಾಡುತ್ತಿರುವುದು ಯಾಕೆ ಎಂದು ಡಾ. ಎ. ಮುರಿಗೆಪ್ಪ ಪ್ರಶ್ನಿಸಿದರು.

ಹಾವೇರಿ: ರಾಜ್ಯ ಸರ್ಕಾರ ಹಾವೇರಿ ವಿವಿಯನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ಈ ಕುರಿತಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಅದಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸುವ ನಿರ್ಣಯವನ್ನು ಸೋಮವಾರ ಇಲ್ಲಿಯ ನಡೆದ ದುಂಡು ಮೇಜಿನ ಸಭೆಯಲ್ಲಿ ಕೈಗೊಳ್ಳಲಾಯಿತು.

ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಆಯೋಜಿಸಿದ್ಧ ಹಾವೇರಿ ಜಿಲ್ಲೆಯ ಅಸ್ಮಿತೆ; ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಲು- ಬೆಳೆಸಲು ದುಂಡು ಮೇಜಿನ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಕರ್ನಾಟಕ ವಿವಿ ವಿಶ್ರಾಂತ ಉಪಕುಲಪತಿ ಡಾ. ಎ. ಮುರಿಗೆಪ್ಪ ಮಾತನಾಡಿ, ರಾಜ್ಯ ಸರ್ಕಾರವೇ ಮಂಜೂರು ಮಾಡಿರುವ ವಿಶ್ವವಿದ್ಯಾಲಯವನ್ನು ಮತ್ತೆ ಎರಡು ವರ್ಷದ ನಂತರ ಮುಚ್ಚುವುದು ಅಥವಾ ವಿಲೀನ ಮಾಡುತ್ತಿರುವುದು ಯಾಕೆ? ಈಗಿರುವ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಹಾಗೂ ಇತರೆ ಅವಶ್ಯಕ ಅಧ್ಯಯನ ವಿಭಾಗಗಳನ್ನು ತೆರೆದು ಉನ್ನತೀಕರಿಸಬೇಕು ಎಂದು ಹೋರಾಟ ಮಾಡಬೇಕಿತ್ತು. ಆದರೆ ಸರ್ಕಾರ ವಿವಿ ಮುಚ್ಚಲು ಹೊರಟಿದ್ದರಿಂದ ಹೋರಾಟ ಮಾಡುವಂತಾಗಿರುವುದು ಶೋಚನೀಯ ಎಂದು ಖೇದ ವ್ಯಕ್ತಪಡಿಸಿದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಜನರ ಅಶೋತ್ತರಗಳನ್ನು ಈಡೇರಿಸುವುದು ಎಷ್ಟು ಮುಖ್ಯವೋ, ಅಷ್ಟೇ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದು ಕೂಡ ಮುಖ್ಯವಾಗಿದೆ. ಶಿಕ್ಷಣ, ಉದ್ಯೋಗವನ್ನು ಒದಗಿಸಿ ಸ್ವಾವಲಂಬಿಗಳಾಗಿಸಲು ಪೂರಕವಾಗಿ ಯೋಜನೆ ತಂದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲು ಜಿಲ್ಲೆಯ ಎಲ್ಲ ಸ್ವಾಮೀಜಿಗಳು ಕಂಕಣಬದ್ಧರಾಗಿದ್ದೇವೆ. ಸರ್ಕಾರ ಈ ವಿಶ್ವವಿದ್ಯಾಲಯ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, ಹಾವೇರಿ ವಿವಿಯನ್ನು ವಿಲೀನಗೊಳಿಸಲು ಬೇರೆ ಬೇರೆ ಕಾರಣಗಳನ್ನು ಹೇಳುತ್ತಿದೆ. ಈ ವಿವಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮಕ್ಕಳು ಕಲಿಯುತ್ತಿದ್ದಾರೆ. ಸರ್ಕಾರದ ಈ ನಡೆಯಿಂದ ಇಲ್ಲಿಯ ಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಹೊರಟಿದೆ. ಈ ವಿವಿ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದರು.

ನಗರಸಭೆಯ ಸದಸ್ಯ ಸಂಜೀವ ಕುಮಾರ ನೀರಲಗಿ ಮಾತನಾಡಿದರು. ದುಂಡು ಮೇಜಿನ ಸಭೆಯಲ್ಲಿ ಬಣ್ಣದ ಮಠದ ಅಭಿನರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ವಿದ್ಯಾರ್ಥಿ ಪ್ರತಿನಿಧಿ ಪರಮೇಶ್, ಹಿರಿಯ ನಾಗರಿಕರ ವೇದಿಕೆ ಮುಖಂಡರಾದ ಪ್ರೊ. ಡಿ.ವಿ. ಹಿರೇಮಠ, ಎಸ್.ಎನ್. ತಿಪ್ಪನಗೌಡ್ರ, ಅನಿತಾ ಮಂಜುನಾಥ, ಕರವೇ ಮುಖಂಡರಾದ ಕರಬಸಯ್ಯ ಬಸರೀಹಳ್ಳಿಮಠ, ಡಿಎಸ್ಎಸ್ ರಾಜ್ಯ ಮುಖಂಡರಾದ ಉಡಚಪ್ಪ ಮಾಳಗಿ, ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ನಾಯಕ, ಕರವೇ ಗಜಪಡೆ ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಲಮಾಣಿ, ಕರವೇ ಸ್ವಾಭಿಮಾನಿ ಬಣದ ಸಂಜೀವರೆಡ್ಡಿ ಮುದಗುಣಕಿ, ಸಿಐಟಿಯು ಹಮಾಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡರಾದ ಮಲ್ಲೇಶ ಮದ್ಲೇರ್, ಸಾಹಿತಿ ಕಲಾವಿದರ ಬಳಗದ ಕೆ.ಎನ್. ಜಾನ್ವೇಕರ್, ಡಾ. ತಿಪ್ಪೇಸ್ವಾಮಿ ಹೊಸಮನಿ, ಹನುಮಂತಗೌಡ ಗಾಜೀಗೌಡ್ರ, ಲೇಖಕಿ ಅಕ್ಕಮಹಾದೇವಿ ಹಾನಗಲ್, ನಿವೃತ್ತ ಸೈನಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಯರೇಸೀಮಿ, ಬಹುಜನ ಚಳವಳಿಯ ಮುಖಂಡ ಎಂ.ಕೆ. ಮಕಬುಲ್, ಜುಬೇದಾ ನಾಯ್ಕ್, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಬಿಜಿವಿಎಸ್ ರಾಜ್ಯ ಮುಖಂಡರಾದ ರೇಣುಕಾ ಗುಡಿಮನಿ ಮಾತನಾಡಿದರು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸಿ.ಆರ್. ಮಾಳಗಿ, ರಾಜೇಂದ್ರ ಹೆಗಡೆ, ಗಿರೀಶ ಬಾರ್ಕಿ, ಶರಣು ಸಂಗನಾಳ, ಪೃಥ್ವಿರಾಜ ಬೆಟಗೇರಿ, ಸತೀಶ ಎಂ.ಬಿ., ಮಂಜಪ್ಪ ಮರೋಳ, ಜ್ಯೋತಿ ಅರ್ಕಸಾಲಿ, ಬಾಲಚಂದ್ರ ಹಂದ್ರಾಳ, ಶಿವಯೋಗಿ ಹೊಸಗೌಡ್ರ, ವೀರಭದ್ರಗೌಡ ಹೊಮ್ಮರಡಿ, ಎಸ್.ಬಿ. ಅಣ್ಣಿಗೇರಿ, ವಿ.ಎಸ್. ಮುಳತಳ್ಳಿ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.

ದುಂಡು ಮೇಜಿನ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ವಿವಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಮಾತನಾಡಿದರು. ಎಂ. ಆಂಜನೇಯ ಸ್ವಾಗತಿಸಿದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ