ರಾಮನಗರ: ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಂಚಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿರುವುದು ಹಾಗೂ ಸದನದಿಂದ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಕ್ರಮ ಖಂಡಿಸಿ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಸೇರಿದ ಉಭಯ ಪಕ್ಷಗಳ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರಿ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿರುವುದು ಅಸಂವಿಧಾನಿಕ ನಡೆಯಾಗಿದೆ. ರಾಜ್ಯ ಸರ್ಕಾರ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಮೇಲ್ನೋಟಕ್ಕೆ ಶೇಕಡ 4ರಷ್ಟು ಕಾಮಗಾರಿ ಗುತ್ತಿಗೆಗಳಲ್ಲಿ ಮೀಸಲಾತಿ ಕೊಡುವ ಕಾನೂನು ಮಾಡಿರಸಬಹುದು. ಆದರೆ, ದೂರಗಾಮಿ ಪರಿಣಾಮ ಮೀಸಲಾತಿ ಚರ್ಚೆಗೆ ಧಕ್ಕೆ ತರುವಂತಹ ಹುನ್ನಾರಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ ಎಂದು ಟೀಕಿಸಿದರು.
ಮುಸ್ಲಿಂ ಓಲೈಕೆ ನೀತಿಯ ಭಾಗವಾದ ಈ ನಿರ್ಧಾರ ಜನತೆಗೆ ಎಸಗಿದ ದ್ರೋಹ. ಸಂವಿಧಾನ ಉಳಿಸಿ ಎನ್ನುತ್ತಿರುವ ಕಾಂಗ್ರೆಸ್ಸಿಗರೇ ಈಗ ಧರ್ಮಾಧಾರಿತ ಮೀಸಲನ್ನು ಜಾರಿಗೊಳಿಸಿ ಡಾ.ಬಿ.ಆರ್.ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ವರ್ತಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಎಲ್ಲ ಮತ, ಧರ್ಮದ ಜನರನ್ನು ಸಮಾನವಾಗಿ ಕಾಣುತ್ತಿದ್ದರೆ, ಕಾಂಗ್ರಸ್ ಸರ್ಕಾರ ಮುಸ್ಲಿಂರ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣಾ ಸ್ವಾರ್ಥಕ್ಕೆ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಸಾಮಾಜಿಕ ನ್ಯಾಯದ ಆದರ್ಶ ಪರಿಕಲ್ಪನೆಯಾದ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಮೀಸಲಾತಿಯನ್ನೇ ಓಲೈಕೆ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ ಎಂದು ದೂರಿದರು.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ದುರ್ಬಲವಾಗಿರುವ ಎಲ್ಲ ಸಮುದಾಯಗಳಿಗೆ ಸಮಾನ ಅವಕಾಶಗಳು , ಸೌಲಭ್ಯಗಳು ಸಿಗಬೇಕು. ಆದರೆ, ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಛೀಕರಣ ನ್ಯಾಯ ಸಮ್ಮತವಲ್ಲ. ಇದು ಸಂವಿಧಾನಕ್ಕೆ ಎಸಗುವ ಅಪಚಾರ ಎಂದು ಕಿಡಿಕಾರಿದರು.ಹನಿಟ್ರ್ಯಾಪ್ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ ಕಾರಣಕ್ಕೆ 18 ಮಂದಿ ಬಿಜೆಪಿ ಶಾಸಕರನ್ನು ಅಮಾನತ್ತು ಮಾಡಿರುವುದು ಅತ್ಯಂತ ಖಂಡನೀಯ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕರಾಳ ದಿನ. ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಶಾಸಕರ ಅಮಾನತು ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ರುದ್ರದೇವರು, ಶಿವಾನಂದ, ಚಂದ್ರಶೇಖರರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಜಯಕುಮಾರ್, ವಿಭೂತಿಕೆರೆ ಸೊಸೈಟಿ ಅಧ್ಯಕ್ಷ ವಾಸು ಮತ್ತಿತರರು ಭಾಗವಹಿಸಿದ್ದರು.24ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಐಜೂರು ವೃತ್ತದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹಾಗೂ ಬಿಜೆಪಿ ಶಾಸಕರ ಅಮಾನತು ಕ್ರಮ ಖಂಡಿಸಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.