ಹುಬ್ಬಳ್ಳಿ: ನಮ್ಮನ್ನು ನಾವು ಮೋಸಗೊಳಿಸದಿರುವುದೇ ಮಹಾಪೂಜೆ. ಸರಿ-ತಪ್ಪುಗಳ ಮಹಾವಿಮರ್ಶಕ ನಮ್ಮೊಳಗೇ ಇದ್ದಾನೆ. ಆತ ನೀಡುವ ತೀರ್ಪಿಗೆ ಕಿವಿಗೊಟ್ಟು, ತನು ಮನ ಭಾವವನ್ನು ಭಗವಂತನಲ್ಲಿ ಮೀಸಲಿಟ್ಟು ಪೂಜಿಸಿದರೆ ಅದುವೇ ಮಹಾಪೂಜೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಸೋಮವಾರ ಉಣಕಲ್ ಸಿದ್ದಪ್ಪಜ್ಜನ ಜಾತ್ರೆಯ 9ನೇ ದಿನದ ಪ್ರವಚನ ನೀಡಿದ ಅವರು, ಅನುವಿನೊಳು ಅನುವಾಗಿರುವ, ಮಹಾಂತರಲ್ಲಿ ಮಹಾಂತನಾಗಿರುವ ದೇವರಿಗೆ ಪೂಜಿಸುವುದೆಂದರೆ ನಮ್ಮನ್ನು ನಾವು ಪೂಜಿಸಿಕೊಂಡಂತೆ. ನಮ್ಮನ್ನು ನಾವು ಪೂಜಿಸಿಕೊಳ್ಳುವುದೇ ದೇವರ ಪೂಜೆ ಎಂದು ವಿವರಿಸಿದರು.ಗುರುವಾದವನು ಮನುಷ್ಯರಿಗೆ ದೇವರು, ಧರ್ಮ, ಪೂಜೆ, ಪ್ರಸಾದಗಳ ಬಗ್ಗೆ ಸರಿಯಾದ ತಿಳುವಳಿಕೆ ನೀಡಬೇಕು. ಅಂತರಂಗದ ಅರಿವನ್ನು ಜಾಗೃತ ಮಾಡಿಕೊಳ್ಳುವುದೇ ನಿಜವಾದ ಪೂಜೆ ಎನ್ನುವುದನ್ನು ಮನವರಿಕೆ ಮಾಡಬೇಕು. ಮುಳುಗುವುದು, ಸುತ್ತುವವುದೇ ಪೂಜೆ ಎಂದು ನಂಬಿದವರನ್ನು ಆ ಮೂಢ ನಂಬಿಕೆಯಿಂದ ಹೊರಗೆ ತರುವುದು ಗುರು ಆದವನ ಆಧ್ಯ ಕರ್ತವ್ಯ ಎಂದರು.
ಖಾವಿ ತೊಟ್ಟವರೆಲ್ಲ ಸ್ವಾಮಿಗಳಲ್ಲಯಾವುದ್ಯಾವುದೋ ಕಾರಣಕ್ಕೆ ಕೆಲವರು ಇಂದು ಖಾವಿ ಧರಿಸುತ್ತಿದ್ದಾರೆ. ಹಾಗಾಗಿ ಖಾವಿ ಬಟ್ಟೆ ತೊಟ್ಟವರೆಲ್ಲ ಗುರು, ಸ್ವಾಮಿ, ಮಠಾಧೀಶ ಆಗುವುದಿಲ್ಲ. ಇಂದು ನಿಜವಾದ ಗುರು ಯಾರು ಎಂದು ಗುರುತಿಸುವುದೇ ಕಷ್ಟವಾಗಿದೆ. ಕಷ್ಟ ಕಾಲದಲ್ಲಿ ಆಪ್ತನಂತೆ ನಿಂತು ದೃತಿಗೆಡಬೇಡ, ಸೋಲಬೇಡ, ಕಷ್ಟ ಕ್ಷಣಿಕ ದೇವರಿದ್ದಾನೆ ಎಂದು ಧೈರ್ಯ ತುಂಬಿ ಬದುಕಲು ಹಚ್ಚುವವ ನಿಜವಾದ ಗುರು. ಈ ಗುರುಗಳು ತಮ್ಮ ಪಾತ್ರ ನಿರ್ವಹಿಸುವುದರಲ್ಲಿ ಸೋತಿದ್ದರಿಂದ ಸಮಾಜದಲ್ಲಿ ಏನೇನೋ ಅಹಿತಕರ ಘಟನೆಗಳು ಸಂಭಿಸುತ್ತಿವೆ ಎಂದು ಶ್ರೀಗಳು ವಿಷಾಧಿಸಿದರು.
ದೇವರು ಎಂದರೆ ಯಾರು? ಹೇಗಿದ್ದಾನೆ? ಅವನ ಸ್ಥಾನ ಯಾವುದು? ಏನು ಮಾಡುತ್ತಿದ್ದಾನೆ ಎನ್ನುವ ಯತಾರ್ಥ ಜ್ಞಾನವನ್ನು ಜನತೆಗೆ ನೀಡಬೇಕಾಗುತ್ತದೆ. ಅಂದಾಗ ಮಾತ್ರ ಅವರ ಆತ್ಮ ದೇವಭಾವ ಹೊಂದಲು ಸಾಧ್ಯವಾಗುತ್ತದೆ. ಲಿಂಗಾಂಗ ಸಾಮರಸ್ಯದ ಬಗ್ಗೆ ಶರಣರು ದೊಡ್ಡ ದನಿಯಲ್ಲಿ ಹೇಳಿ, ಶಾಶ್ವತ ನೆಮ್ಮದಿ ಅನುಭವಿಸಿದರು ಎಂದರು.ಹೊಸ ಕುಡುಕರ ಉದಯ
ನಮ್ಮ ಯುವ ಸಮುದಾಯಕ್ಕೆ ಧರ್ಮ, ಪೂಜೆ, ಭಕ್ತಿಯ ಬಗ್ಗೆ ಧಾರ್ಮಿಕ ಮುಖಂಡರು ಮತ್ತು ತಂದೆ-ತಾಯಿಗಳು ಸರಿಯಾದ ತಿಳುವಳಿಕೆ ನೀಡದಿರುವುದು ಅವರನ್ನು ವ್ಯಸನಗಳ ದಾಸರಾಗುವಂತೆ ಮಾಡಿದೆ. ಪ್ರತಿ ಚೌತಿಗೂ ಹೊಸ ಕುಡುಕರು ಹುಟ್ಟಿಕೊಳ್ಳುತ್ತಿದ್ದಾರೆ. ಭಕ್ತಿ, ಶ್ರದ್ಧೆಯಿಂದ ಗಣೇಶನನ್ನು ಪ್ರತಿಷ್ಠಾಪಿಸಿ, ಸಂಭ್ರಮದಿಂದ ವಿಸರ್ಜನೆ ಮಾಡಬೇಕಿದ್ದ ಯುವಕರು ರಾತ್ರಿಯೆಲ್ಲ ಇಸ್ಪೀಟ್ ಆಡಿ, ಮೆರವಣಿಗೆಯಲ್ಲಿ ಡಿಜೆ ಹಚ್ಚಿ ಕುಡಿದು ಕುಣಿದು ಕುಪ್ಪಳಿಸಿ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ. ಇದನ್ನೆಲ್ಲ ಕಣ್ಣಾರೆ ನೋಡಿಯೂ ತಿಳುವಳಿಕೆಯ ಮಾತು ಹೇಳದೇ ಮೌನವಾಗಿರುವ ನಾವುಗಳು ಮಹಾ ಡೇಂಜರ್ ಎಂದು ಶ್ರೀಗಳು ನೊಂದು ನುಡಿದರು.ಕೆಟ್ಟದ್ದನ್ನು ಕೇಳದಂತೆ, ಕೆಟ್ಟದ್ದನ್ನು ನೋಡದಂತೆ ತನುಶುಚಿತ್ವದ ಮಾರ್ಗದಲ್ಲಿ ಮಕ್ಕಳನ್ನು ಬೆಳೆಸಿದರೆ ಅತ್ಯಾಚಾರ, ಭ್ರಷ್ಟಾಚಾರ, ಸುಳ್ಳು, ಮೋಸ, ವಂಚನೆಗಳಂತ ಅನಾಚಾರಗಳು ಈ ಸಮಾಜದಿಂದ ಮಾಯವಾಗುತ್ತವೆ. ಹಬ್ಬಗಳಿಂದ ಬದುಕು ಹಾಳು ಮಾಡಿಕೊಳ್ಳುವುದು ತಪ್ಪುತ್ತದೆ ಎಂದು ಕಿವಿಮಾತು ಹೇಳಿದರು.
ಮನೆಗಳಲ್ಲಿ ನಿತ್ಯ ಮಕ್ಕಳಿಗೆ ಶರಣರ ವಚನ ಹೇಳಿಕೊಡಿ. ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಬಸವಣ್ಣನವರ "ಕಳಬೇಡ ಕೊಲಬೇಡ... " ವಚನದ ಮೂಲಕ ಪ್ರಮಾಣ ವಚನ ಬೋಧಿಸಿದರೆ ದೇಶದ ಹಲವು ರೋಗಗಳು ತನ್ನಿಂದ ತಾನೇ ವಾಸಿಯಾಗುತ್ತವೆ ಎಂದು ನಿಜಗುಣಾನಂದರು ಅಭಿಪ್ರಾಯಪಟ್ಟರು.ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮತ್ತು ಉಣಕಲ್ ಗ್ರಾಮದ ಹಿರಿಯರು ಪ್ರವಚನದಲ್ಲಿ ಭಾಗವಹಿಸಿದ್ದರು.