ಟಿಎಸ್‌ಎಸ್‌ ಮಾಜಿ ಪ್ರಧಾನ ವ್ಯವಸ್ಥಾಪಕ, ಕಾರ್ಯಾಧ್ಯಕ್ಷನ ವಿರುದ್ಧ ದೂರು ದಾಖಲು

KannadaprabhaNewsNetwork | Published : May 5, 2024 2:01 AM

ಸಾರಾಂಶ

ರಾಜ್ಯದ ಪ್ರತಿಷ್ಠಿತ ಅಡಕೆ ಬೆಳೆಗಾರರ ಸಂಸ್ಥೆಗೆ ಮೋಸ ಮಾಡಿದ ಮಾಜಿ ಪ್ರಧಾನ ವ್ಯವಸ್ಥಾಪಕ ಹಾಗೂ ಮಾಜಿ ಕಾರ್ಯಾಧ್ಯಕ್ಷನ ವಿರುದ್ಧ ಹೊರ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ: ರಾಜ್ಯದ ಪ್ರತಿಷ್ಠಿತ ಅಡಕೆ ಬೆಳೆಗಾರರ ಸಂಸ್ಥೆಗೆ ಮೋಸ ಮಾಡಿದ ಮಾಜಿ ಪ್ರಧಾನ ವ್ಯವಸ್ಥಾಪಕ ಹಾಗೂ ಮಾಜಿ ಕಾರ್ಯಾಧ್ಯಕ್ಷನ ವಿರುದ್ಧ ಹೊರ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಪಿಎಂಸಿ ರಿಂಗ್ ರಸ್ತೆಯ ಹಾಲಿ ನಿವಾಸಿ ಹಲಸನಳ್ಳಿಯ ಟಿ.ಎಸ್.ಎಸ್. ಮಾಜಿ ವ್ಯವಸ್ಥಾಪಕ ರವೀಶ ಅಚ್ಯುತ ಹೆಗಡೆ (58) ಹಾಗೂ ಕಡವೆಯ ಟಿ.ಎಸ್.ಎಸ್. ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ (72) ಮೇಲೆ ಪ್ರಕರಣ ದಾಖಲಾಗಿದೆ.

ಟಿ.ಎಸ್.ಎಸ್. ಸಂಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕ ಎಂದು ರವೀಶ ಹೆಗಡೆ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಜತೆ ಶಾಮೀಲಾಗಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳು ಹಾಗೂ ಸಂಘದ ನಿಯಮಾವಳಿಗಳಿಗೆ ವಿರುದ್ಧವಾಗಿ ಮತ್ತು ಸ್ವಂತ ಲಾಭಕ್ಕಾಗಿ ತನ್ನ ನಿವೃತ್ತಿಯ ಅವಧಿ ಮುಗಿಯುವ ಮುನ್ನವೇ ಭವಿಷ್ಯನಿಧಿ ವೇತನ, ಗ್ರಾಚುಟಿ ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. 2020 ಅ. 5ರಂದು ಬ್ಯಾಂಕ್ ಆಪ್ ಬರೋಡಾ ಚೆಕ್ ನಂ.: 915055 ಪ್ರಕಾರ ₹ 1,00,97,145 ಮತ್ತು ಬ್ಯಾಂಕ್ ಆಫ್ ಬರೋಡಾ ಚೆಕ್ ನಂ. 915055ನಲ್ಲಿ ₹42,75,332 ನ್ನು ರವೀಶ ಹೆಗಡೆ ಖಾತೆಗೆ ಜಮಾ ಆಗಿದೆ. ಇದಲ್ಲದೇ ಆದಾಯ ತೆರಿಗೆ ಮುರಿತ (ಟಿ.ಡಿ.ಎಸ್.) ಎಂದು ₹88,67,590 ನಮ್ಮ ಸಂಘದಿಂದ ಆದಾಯಕರ ಇಲಾಖೆಗೆ ಪಾವತಿ ಮಾಡಿದೆ. ₹2 ಲಕ್ಷಗಳನ್ನು ಸಾಲದ ಖಾತೆಗೆ ಜಮಾ ಮಾಡಲಾಗಿದೆ. ಹೀಗೆ ₹56,11,314ಗಳನ್ನು ವೇತನವೆಂದು ಪಾವತಿ ಮಾಡಬೇಕಾಗಿತ್ತು. ಆದರೆ ₹2,39,40,067ಗಳಲ್ಲಿ ರವೀಶ ಅಚ್ಯುತ್ ಅರ್ಹ ವೇತನ ₹56,11,314ಗಳನ್ನು ವಜಾ ಮಾಡಿದಲ್ಲಿ ₹1,83,28,753 ಗಳನ್ನು ಅಕ್ರಮವಾಗಿ ಪಡೆದು ಟಿ.ಎಸ್.ಎಸ್. ಸಂಘಕ್ಕೆ ವಂಚಿಸಿ ಹಾನಿ ಉಂಟು ಮಾಡಿದ್ದಾರೆ ಎಂದು ಟಿ.ಎಸ್.ಎಸ್, ಪ್ರಭಾರಿ ವ್ಯವಸ್ಥಾಪಕ ವಿಜಯಾನಂದ ಸುಬ್ರಹ್ಮಣ್ಯ ಭಟ್ಟ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಹೊಸ ಮಾರುಕಟ್ಟೆ ಠಾಣೆಯ ತನಿಖಾ ಪಿಎಸ್‌ಐ ಲತಾ ಕೆ.ಎಸ್. ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಕಾರು ಸ್ವಂತಕ್ಕೆ ಬಳಕೆ-ದೂರು

ಟಿಎಸ್‌ಎಸ್‌ ಸಂಸ್ಥೆಯ ಕಾರುಗಳನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಂಡ ಮಾಜಿ ವ್ಯವಸ್ಥಾಪಕ ಹಾಗೂ ಮಾಜಿ ಕಾರ್ಯಾಧ್ಯಕ್ಷನ ವಿರುದ್ಧ ನಗರದ ಹೊರ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರದ ಎಪಿಎಂಸಿ ರಿಂಗ್ ರಸ್ತೆಯ ಹಾಗೂ ಹಲಸಳ್ಳಿಯ ರವೀಶ ಅಚ್ಯುತ ಹೆಗಡೆ (58) ಹಾಗೂ ತಾಲೂಕಿನ ಕಡವೆಯ ರಾಮಕೃಷ್ಣ ಶ್ರೀಪಾದ ಹೆಗಡೆ (72 ) ಮೇಲೆ ದೂರು ದಾಖಲಾಗಿದೆ.

ಸಂಘದಿಂದ ₹55,04,555 ವೆಚ್ಚದಲ್ಲಿ ವೋಲ್ವೋ ಕಾರು ಖರೀದಿಸಲಾಗಿತ್ತು. ಈ ಕಾರನ್ನು ರವೀಶ ಹೆಗಡೆ ಮೂರು ವರ್ಷದ ಬಳಿಕ ಸಂಘದಿಂದ ಖರೀದಿ ಮಾಡಬೇಕೆಂಬ ಷರತ್ತು ವಿಧಿಸಿ ಠರಾವು ಸಹ ಮಾಡಲಾಗಿತ್ತು. ಆದರೆ ರವೀಶ ಹೆಗಡೆ ಮೂರು ವರ್ಷದ ಮೊದಲೇ 2020 ಜು. 20ರಂದು ವೋಲೋ ಕಾರನ್ನು ಸಂಘದಿಂದ ಅವರ ಹೆಸರಿಗೆ ವರ್ಗಾಯಿಸಿಕೊಂಡಿದ್ದು, ಆ ಕಾರಿನ ಸವಕಳ ಮೌಲ್ಯ ಕಡಿತಗೊಂಡು ₹40,03,359 ಆಗಲಿದೆ. ಆದರೆ ಆ ಮೊತ್ತ ರವೀಶ ಹೆಗಡೆ ಸಂಘಕ್ಕೆ ತುಂಬದೇ ವಾಹನ ಬದಲಾಯಿಸುವ ನಿಧಿಗೆ ಖರ್ಚು ಹಾಕಿ, ಆಸ್ತಿಗಳ ಖಾತೆಗೆ ಜಮಾ ಪಡೆದುಕೊಂಡಿದ್ದಾರೆ. ಹೀಗಾಗಿ ಅವರು ಕಾರನ್ನು ಉಚಿತವಾಗಿ ಪಡೆದುಕೊಂಡಿದ್ದು, ಇದಕ್ಕೆ ರಾಮಕೃಷ್ಣ ಹೆಗಡೆ ಕಾನೂನು ಬಾಹಿರವಾಗಿ ಠರಾವು ಮಾಡಿ, ಅನುಮೋದನೆ ನೀಡಿದ್ದಾರೆ. ರವೀಶ ಹೆಗಡೆ ಮತ್ತು ರಾಮಕೃಷ್ಣ ಹೆಗಡೆ ಮತ್ತು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ವಂಚನೆ ಮಾಡಿ ಸಂಘಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Share this article