
ರಾಮನಗರ: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಾಗಿ ಬೋರ್‌ವೆಲ್‌ಗಳಿಗೆ ನೀರು ಲಭಿಸಲಿದೆ, ಆ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ಆದ್ದರಿಂದ ಕೆರೆ ತುಂಬಿಸುವ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ನರೇಗಾ ಯೋಜನೆಯಡಿ ಕೆಲವೆಡೆ ಇಂಗುಗುಂಡಿಗಳನ್ನು ತೋಡಲಾಗುತ್ತದೆ. ನಂತರದ ಕೆಲವೇ ದಿನಗಳಲ್ಲಿ ಅವುಗಳನ್ನು ಮುಚ್ಚಲಾಗುತ್ತಿದೆ. ಭೂಮಿಗೆ ನೀರು ಬಸಿದು ಅಂತರ್ಜಲ ಹೆಚ್ಚಳವಾಗುವಲ್ಲಿ ಇಂಗುಗುಂಡಿಗಳು ಹಾಗೂ ಚೆಕ್ ಡ್ಯಾಂಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಕಾರ್ಯಗಳಲ್ಲಿ ಸರ್ಕಾರದ ಜವಾಬ್ದಾರಿಯೊಂದಿಗೆ ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯ. ನೀರನ್ನು ಭೂಮಿಗೆ ಇಂಗಿಸುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಸ್ತೆ ಮೇಲೆ ಬಿದ್ದ ಮಳೆ ನೀರು ವ್ಯರ್ಥವಾಗದಂತೆ ಮಳೆ ನೀರು ಕೊಯ್ಲಿಗೆ ಕ್ರಮ ವಹಿಸುವ ಮೂಲಕ ಕೆರೆಗಳನ್ನು ತುಂಬಿಸಬೇಕು. ಬೋರ್‌ವೆಲ್‌ಗಳು ಬತ್ತದಂತೆ ನೋಡಿಕೊಳ್ಳಬೇಕು. ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕೆರೆ ನಾಲೆಗಳನ್ನು ಶುಚಿಗೊಳಿಸಬೇಕು. ಈ ಮೂಲಕ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮ ವಹಿಸಿ ಎಂದು ಮಂಜುನಾಥ್ ಹೇಳಿದರು.ಜಿಲ್ಲೆಯ ಕೆರೆಗಳ ಒತ್ತುವರಿಯಾಗಿರುವ ಬಗ್ಗೆ ದಿಶಾ ಸಮಿತಿ ಸದಸ್ಯರು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಎಲ್ಲಾ ಕೆರೆಗಳ ಜಾಗ ಸಮೀಕ್ಷೆ ನಡೆಸಲಾಗಿದ್ದು ಒಟ್ಟು 1,700 ಎಕರೆ ಕೆರೆ ಭೂಮಿ ಒತ್ತುವರಿಯಾಗಿದೆ, ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದರು.
ಚನ್ನಪಟ್ಟಣ ತಾಲೂಕು ಆಸ್ಪತ್ರೆ ಕಿರಿದಾಗಿದ್ದು ಅದನ್ನು ವಿಸ್ತರಿಸಲು ಸಾಧ್ಯವಿಲ್ಲ. ಹೊಸ ಜಾಗ ಗುರುತಿಸಿ 200 ಹಾಸಿಗೆಗಳಿರುವ ಹೊಸ ಆಸ್ಪತ್ರೆ ನಿರ್ಮಿಸುವುದು ಮಾತ್ರವಲ್ಲದೇ ಅಗತ್ಯವಿರುವ ವೈದ್ಯರು ಸೇರಿದಂತೆ ಸಿಬ್ಬಂದಿಗಳನ್ನು ಒದಗಿಸಲು ಕ್ರಮವಹಿಸಲಾಗುವುದು. ರಾಮನಗರದ ಅರ್ಚಕರಹಳ್ಳಿಯಲ್ಲಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಂಸದರು ಹೇಳಿದರು.
ಚನ್ನಪಟ್ಟಣದಲ್ಲಿ ಹಾವು ಕಚ್ಚಿ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಚನ್ನಪಟ್ಟಣದ ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ. ಆದರೂ ವೈದ್ಯಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ. ಕೂಡಲೆ ಸಂಬಂಧಿಸಿದ ವೈದ್ಯಾಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಮನಗರದ ರಂಗರಾಯರದೊಡ್ಡಿ ಹಾಗೂ ನಲ್ಲಿಗುಡ್ಡೆ ಕರೆಗಳಲ್ಲಿ ಬೋಟಿಂಗ್ ಮಾಡಲಾಗಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ಕೆರೆಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸುವಂತೆ ಮಂಜುನಾಥ್ ತಿಳಿಸಿದರು.
(ಫೋಟೋ ಕ್ಯಾಫ್ಷನ್)