ತಾಲೂಕಿನ ಒಟ್ಟು ೫೭ ಕೆರೆಗಳಿಗೆ ನಿತ್ಯ ೩ ಸಾವಿರ ಕ್ಯುಸೆಕ್ ನೀರು ಬೇಕಾಗಿದ್ದು, ಈಗ ನೀರಿನ ಹರಿವಿನ ಪ್ರಮಾಣ ೪೦ ಸಾವಿರ ಕ್ಯುಸೆಕ್ ಇದೆ. ಒಂದು ವೇಳೆ ಮಳೆ ನಿಂತುಹೋದರೂ ಇನ್ನು ೪೦ ದಿನಗಳ ಕಾಲ ಕೆರೆಗಳಿಗೆ ನೀರು ಹರಿಯಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಒಟ್ಟು ೫೭ ಕೆರೆಗಳಿಗೆ ನಿತ್ಯ ೩ ಸಾವಿರ ಕ್ಯುಸೆಕ್ ನೀರು ಬೇಕಾಗಿದ್ದು, ಈಗ ನೀರಿನ ಹರಿವಿನ ಪ್ರಮಾಣ ೪೦ ಸಾವಿರ ಕ್ಯುಸೆಕ್ ಇದೆ. ಒಂದು ವೇಳೆ ಮಳೆ ನಿಂತುಹೋದರೂ ಇನ್ನು ೪೦ ದಿನಗಳ ಕಾಲ ಕೆರೆಗಳಿಗೆ ನೀರು ಹರಿಯಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ನೀರಾವರಿ, ಮೂಲಸೌಕರ್ಯ ಹಾಗೂ ವಿರೋಧ ಪಕ್ಷಗಳ ಟೀಕೆಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಿದರು.
ಪ್ರಸ್ತುತ ಮೂರು ಮೋಟಾರ್‌ಗಳನ್ನು ಆನ್ ಮಾಡಲಾಗಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆರಂಭವಾದ ಈ ೫೭ ಕೆರೆ ತುಂಬಿಸುವ ಯೋಜನೆ ಆಯಾ ಕಾಲಘಟ್ಟದಲ್ಲಿ ಫಲಪ್ರದವಾಗಿದೆ. ಹಂತ-ಹಂತವಾಗಿ ಮಾಗಡಿ, ಮಡ್ರಳಿ, ಜಾಡನಕಟ್ಟೆ ಹಾಗೂ ಅಗಸನಹಳ್ಳಿ ಕೆರೆಗಳಿಗೆ ಈ ವರ್ಷ ನೀರು ಹರಿಸಲಾಗುವುದು. ಆದರೆ ಈ ಭಾಗವು ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿರುವ ಕಾರಣ ಕೇಂದ್ರ ಸರಕಾರದಿಂದ ಕಾಮಗಾರಿಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಒಟ್ಟು 676.76 ಕೋಟಿ ರು. ಅನುದಾನ ನೀಡಿದೆ ಎಂದರು.
ಕೇಂದ್ರದ ವಿರುದ್ಧ ಆಕ್ರೋಶ:
ಭದ್ರಾ ಮೇಲ್ದಂಡೆ ಯೋಜನೆಯ ಶೇ.೩೫ ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಇನ್ನು ೧೫೦೦ ಕೋಟಿ ರು. ಅಗತ್ಯವಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ವಿಪಕ್ಷಗಳು ಕೇವಲ ಸಂಭ್ರಮಿಸಿದವೇ ಹೊರತು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದ ೫೩೦೦ ಕೋಟಿ ರುಪಾಯಿಗಳಲ್ಲಿ ಬಿಡಿಗಾಸನ್ನೂ ನೀಡಿಲ್ಲ. ನಾವು ಕಟ್ಟಿದ ತೆರಿಗೆ ನಮಗೆ ವಾಪಸ್ ಬರುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
‘ಕುಂಬಳಕಾಯಿಯಲ್ಲಿ ಬಾಂಬುಂಟು’ ಎನ್ನುವುದನ್ನು ಬಿಡಲಿ: ಕಲ್ಲೇರುದ್ರೇಶ್‌ಗೆ ಟಾಂಗ್!:
ತಮ್ಮ ರಾಜಕೀಯ ಗುರುಗಳಾದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಅವರ ಆಧಾರ ರಹಿತ ಟೀಕೆಗಳ ವಿರುದ್ಧ ಹರಿಹಾಯ್ದ ಶಾಸಕರು, ಕಲ್ಲೇರುದ್ರೇಶ್ ಅವರು ಮೊದಲು ತಮ್ಮ ಅಳಿಯ ರುದ್ರೇಶ್ ಸರಕಾರಿ ಕೆಲಸಕ್ಕೆ ಹೋಗದಿರುವ ಬಗ್ಗೆ ಮಾತನಾಡಲಿ. ಮಾತೆತ್ತಿದರೆ ಕುಮಾರಸ್ವಾಮಿ ಕಾಲದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಆಗಿದ್ದು ಎನ್ನುವವರು ನೇರವಾಗಿ ನಮ್ಮ ಬಳಿ ಬಂದು ಚರ್ಚಿಸಲಿ. ಜಗಳೂರು ಕೈಬಿಟ್ಟು ಹೋಗುತ್ತದೆ ಎಂಬ ಆತಂಕ ಬೇಡ, ಬೇಕಿದ್ದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಲಿ, ನಮ್ಮ ಪಕ್ಷದಿಂದಲೂ ನಾವು ಬರುತ್ತೇವೆ. ಅದನ್ನು ಬಿಟ್ಟು ಕುಂಬಳ ಕಾಯಲ್ಲಿ ಬಾಂಬುಂಟು ಮಾರಾಯ ಎಂದು ಹೇಳಿಕೊಂಡು ತಿರುಗಾಡುವುದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡರಾದ ಕೆ .ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯರಾದ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ತಿಪ್ಪೇಸ್ವಾಮಿಗೌಡ್ರು, ತಿಮ್ಮಾರೆಡ್ಡಿ, ಪ್ರಕಾಶ್ ರೆಡ್ಡಿ, ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.