ಶಿವಮೊಗ್ಗ: ಪ್ರೇಕ್ಷಕ ಹಾಗೂ ಸಿನಿಮಾ ಮಾಡುವವರ ನಡುವೆ ಸಿನಿಮಾ ಹಬ್ಬಗಳು ಸೇತುವೆಯಂತೆ ಕೆಲಸ ಮಾಡುತ್ತವೆ ಎಂದು ಚಲನಚಿತ್ರ ನಿರ್ದೇಶಕ ಮನ್ಸೋರೆ ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಐವನ್ ಡಿಸಿಲ್ವಾ ಮಾತನಾಡಿ, ಸಿನಿಮಾ ಆಸಕ್ತರು ಒಂದೆಡೆ ಸೇರಿ ಸಿನಿಮಾಗಳ ಬಗ್ಗೆ ಚರ್ಚಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಎಲ್ಲ ವಯೋಮಾನದವರು ಸೇರಿ ನಡೆಸುವ ಈ ಚರ್ಚೆಗಳು ಹೊಸ ಅರ್ಥ ನೀಡುತ್ತವೆ. ಪ್ರಾಪಗಂಡ ಸಿನಿಮಾಗಳೂ ಬರುತ್ತಿರುವ ಇಂದಿನ ದಿನಗಳಲ್ಲಿ ಚರ್ಚೆಗಳು ಅಗತ್ಯ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯ ಕೆ. ಫಣಿರಾಜ್ ಮಾತನಾಡಿ, ವಾಟ್ಸ್ಯಾಪ್ ಗ್ರೂಪಿನಲ್ಲಿ ಶುರುವಾದ ಚರ್ಚೆಯು ಇಂತಹ ಸಿನಿಹಬ್ಬಗಳಿಗೆ ಚಾಲನೆ ಕೊಟ್ಟಿತು. ಇಂದು ನಡೆಯುತ್ತಿರುವುದು ಈ ಸರಣಿಯ 25ನೇ ಕಾರ್ಯಕ್ರಮ ಎಂದರು.ಸಾಹಿತಿ, ಕಲಾವಿದೆ ಕೃತಿ ಪುರಪ್ಪೆಮನೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿದರು.
ಜಿ.ಟಿ. ಸತೀಶ್ ಸ್ವಾಗತಿಸಿ, ಅಕ್ಷತಾ ಹುಂಚದಕಟ್ಟೆ ವಂದಿಸಿ, ಹೊನ್ನಾಳಿ ಚಂದ್ರಶೇಖರ್ ನಿರೂಪಿಸಿದರು.ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಿನಿಮಾಗಳ ಬಗ್ಗೆ ಚರ್ಚೆ, ಸಂವಾದ ನಡೆಯುವುದು.