ಸಂಸದೆ ಡಾ.ಪ್ರಭಾ, ಕಾಂಗ್ರೆಸ್ ಸಂಸದರ ನಿಯೋಗ ದೆಹಲಿಯಲ್ಲಿ ನಿರ್ಮಲಾ ಭೇಟಿ । ಕೃಷಿಗೆ ಅನುದಾನ ಕಡಿತ ಸರಿಯಲ್ಲ ಎಂದ ನಿಯೋಗ
ಕನ್ನಡಪ್ರಭ ವಾರ್ತೆ ದಾವಣಗೆರೆಕರ್ನಾಟಕ ರಾಜ್ಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವುದೂ ಸೇರಿದಂತೆ ಅನೇಕ ಮಹತ್ವದ ವಿಷಯಗಳ ಬಗ್ಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ರನ್ನು ರಾಜ್ಯದ ಕಾಂಗ್ರೆಸ್ ಸಂಸಸದರು ಭೇಟಿ ಮಾಡಿ, ಮನವಿ ಸಲ್ಲಿಸಿದರು.
ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ರನ್ನು ಸಚಿವರ ಕಚೇರಿಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ಭೇಟಿ ಮಾಡಿದ ರಾಜ್ಯದ ಯುವ ಸಂಸದರು, ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ ಅನುದಾನವನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.ಇದೇ ವೇಳೆ ಕೇಂದ್ರ ಸಚಿವೆ ಜತೆಗೆ ರಾಜ್ಯಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ, ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ವಿಶೇಷವಾಗಿ ರಾಜ್ಯ ಸರ್ಕಾರ 2024-25ರ ಕೃಷಿ ಸಾಲಕ್ಕಾಗಿ 9162 ಕೋಟಿ ರು. ಅನುದಾನಕ್ಕೆ ಮನವಿ ಮಾಡಿತ್ತು. ಆದರೆ, ನಬಾರ್ಡ್ ಕೇವಲ 2340 ಕೋಟಿ ರು. ಮಾತ್ರ ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.
2023-24ರ ಬಜೆಟ್‌ನಲ್ಲಿ ಕೃಷಿ ಸಾಲಕ್ಕಾಗಿ 5600 ಕೋಟಿ ರು. ಅನುದಾನ ನೀಡಲಾಗಿತ್ತು. ಆದರೆ, ಈ ಬಾರಿ 9162 ಕೋಟಿ ರು. ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದರೂ ಕೇವಲ 2340 ಕೋಟಿ ರು. ಮಾತ್ರ ನೀಡಿರುವುದು ಅತ್ಯಂತ ಕಡಿಮೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.58 ಕಡಿಮೆಯಾಗಿದೆ. ಈ ಕೊರತೆಯು ರಾಜ್ಯದ ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳುವ ಅಪಾಯವಿದೆ ಎಂದು ಕೇಂದ್ರ ಸಚಿವರ ಗಮನಕ್ಕೆ ತರಲಾಯಿತು.ಸಾಲ ಮಿತಿ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ನಬಾರ್ಡ್ ಮತ್ತು ಆರ್‌ಬಿಐಗೆ ಸೂಚಿಸಬೇಕು. ಎಲ್‌ಐಸಿ ಹಾಗೂ ಜೀವವಿಮಾ ಪ್ರತಿನಿಧಿಗಳ ಭವಿಷ್ಯಕ್ಕೆ ಮಾರಕವಾಗುವ ತಿದ್ದುಪಡಿಯಿಂದ ಪ್ರತಿನಿಧಿಗಳಿಗೆ ತೊಂದರೆಯಾಗಲಿದೆ. ವಿಮಾ ಸೆಕ್ಷನ್ 42 (2) ತಿದ್ದುಪಡಿ ಪ್ರಸ್ತಾವನೆಯಂತೆ ಏಜೆಂಟರ್‌ಗಳಿಗೆ ಬಹು ವಿಮಾ ಕಂಪನಿಗಳೊಂದಿಗೆ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಲಾಯಿತು.
ಸಾರ್ವಜನಿಕ ಸಂಸ್ಥೆಯಾದ ಎಲ್‌ಐಸಿ ಸ್ಥಿರತೆ ಹಾಳು ಮಾಡುವ ಜೊತೆಗೆ ಲಕ್ಷಾಂತರ ಏಜೆಂಟರ ಉದ್ಯೋಗ ಭದ್ರತೆ ಹಾಗೂ ಗ್ರಾಹಕರ ವಿಶ್ವಾಸಕ್ಕೆ ಆಘಾತ ತರುವಂತಿದೆ. ತಿದ್ದುಪಡಿಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಚರ್ಚಿಸಿ, ಎಲ್.ಐ.ಸಿ ಯನ್ನು ಹಾಗೂ ಅದರ ಏಜೆಂಟ್‌ರನ್ನು ರಕ್ಷಿಸುವಂತೆಯೂ ರಾಜ್ಯದ ಸಂಸದರ ನಿಯೋಗ ಮನವಿ ಮಾಡಿತು.ರಾಜ್ಯದ ಕಾಂಗ್ರೆಸ್ ಪಕ್ಷದ ಸಂಸದರ ನಿಯೋಗದಲ್ಲಿ ಶ್ರೇಯಸ್.ಎಂ.ಪಾಟೀಲ್, ಪ್ರಿಯಾಂಕ್ ಜಾರಕಿಹೊಳಿ, ಸಾಗರ್ ಖಂಡ್ರೆ, ಸುನೀಲ್ ಬೋಸ್ ಇತರರು ಇದ್ದರು.
ಇದೇ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ರಿಗೆ ರಾಜ್ಯದ ಸ್ಥಿತಿಗತಿ, ಜನರ ಸಂಕಷ್ಟಗಳ ಬಗ್ಗೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ರಾಜ್ಯದ ಕಾಂಗ್ರೆಸ್ ಯುವ ಸಂಸದರ ನಿಯೋಗವು ಮನವರಿಕೆ ಮಾಡಿಕೊಟ್ಟು, ರಾಜ್ಯಕ್ಕೆ ಅಗತ್ಯ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದರು.