ಸಹಕಾರ ಅಭಿವೃದ್ದಿ ಅಧಿಕಾರಿ ವಿಚಾರಣಾ ವರದಿಯಲ್ಲಿ ದೃಢ । ಮಾಜಿ ಶಾಸಕ ಎ.ವಿ.ಉಮಾಪತಿ ಮಾಹಿತಿ । 2 ಕೋಟಿಯಷ್ಟು ಹಣ ದುರುಪಯೋಗದ ಶಂಕೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ಯಾದವ(ಗೊಲ್ಲರ) ಸಂಘದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಹಾಗೂ ಅಧಿಕಾರ ದುರುಪಯೋಗಕ್ಕೆ ಪುಷ್ಠಿಗಳು ದೊರೆತಿದ್ದು ಸಹಕಾರ ಅಭಿವೃದ್ದಿ ಅಧಿಕಾರಿ ನಡೆಸಿದ ವಿಚಾರಣಾ ವರದಿಯಲ್ಲಿ ದೃಢಪಟ್ಟಿದೆ.ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ಸಹಕಾರ ಅಭಿವೃದ್ದಿ ಅಧಿಕಾರಿ ಸಲ್ಲಿಸಿದ ವಿಚಾರಣಾ ವರದಿಯನ್ನು ಮಾಧ್ಯಮದವರ ಮುಂದೆ ಮಂಡಿಸಿ ಮಾಹಿತಿ ನೀಡಿದ ಮಾಜಿ ಶಾಸಕ ಎ.ವಿ.ಉಮಾಪತಿ, ಮುಂದಿನ ಕಾನೂನು ಹೋರಾಟಕ್ಕೆ ಅಣಿಯಾಗಲಾಗುತ್ತಿದೆ. ಈ ಸಂಬಂಧ ಕಾನೂನು ತಜ್ಞರ ಸಂಪರ್ಕಿಸಲಾಗಿದೆ ಎಂದರು.
ಸಮುದಾಯ ಭವನ ನಿರ್ಮಾಣ ಮಾಡಲು 2019-20 ನೇ ಸಾಲಿನಲ್ಲಿ ಮಾಜಿ ಸಂಸದ ಹಾಗೂ ಅಂದಿನ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ 50 ಲಕ್ಷ ರು ಮಂಜೂರು ಮಾಡಿದ್ದಾರೆ. ಇದಲ್ಲದೇ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು 20 ಲಕ್ಷ ರು ಅನುದಾನ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳು ಕಾಮಗಾರಿ ನಡೆಸಲು 52 ಲಕ್ಷ ರುಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆ ಮಾಡಿದ್ದಾರೆ. ಕಾಮಗಾರಿ ಆರಂಭವಾಗದೇ ಇದ್ದು ಕಾಮಗಾರಿ ಮೌಲ್ಯಕ್ಕಿಂತ ಹೆಚ್ಚುವರಿಯಾಗಿ 24.84 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಲೆಕ್ಕ ಪರಿಶೋಧಕರ ವರದಿಯನ್ನಾಧರಿಸಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದ ಸಿ.ಪಿ.ಮೂಡಲಗಿರಿಯಪ್ಪ ಹಾಗೂ ಇಂಜಿನಿಯರ್ ಸತೀಶ್ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂಬ ಅಂಶವ ಸಹಕಾರ ಅಭಿವೃದ್ದಿ ಅಧಿಕಾರಿಗಳ ವಿಚಾರಣಾ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ನಿವೃತ್ತ ಡಿವೈಎಸ್‌ಪಿ ಹಾಗೂ ಜಿಪಂ ಮಾಜಿ ಸದಸ್ಯ ಅಜ್ಜಪ್ಪ ಮಾತನಾಡಿ, ಸಂಘಕ್ಕೆ ಆಡಳಿತಾಧಿಕಾರಿಗಳ ನೇಮಕವಾದ ನಂತರ ಕಳೆದ ಎಂಟು ತಿಂಗಳಲ್ಲಿ ಸುಮಾರು 10 ಲಕ್ಷ ರೂಪಾಯಿ ಹಣ ಸಂಘದ ಖಾತೆಯಲ್ಲಿದೆ. ಆದರೆ ಹತ್ತು ವರ್ಷ ಆಡಳಿತ ನಡೆಸಿದವರು 30 ಸಾವಿರ ರೂಪಾಯಿ ಉಳಿಸಿರಲಿಲ್ಲ. ಕನಿಷ್ಟ ಎರಡು ಕೋಟಿ ರುಪಾಯಿಷ್ಟು ಹಣ ದುರುಪಯೋಗವಾಗಿರುವ ಶಂಕೆ ಇದೆ ಎಂದರು.