ಕನ್ನಡಪ್ರಭ ವಾರ್ತೆ ಮಧುಗಿರಿ
ಜನರ ಮನೆ ಬಾಗಿಲಿಗೆ ತೆರಳಿ, ಅವರ ಸಮಸ್ಯೆಗಳನ್ನು ಆಲಿಸಲು ರಾಜ್ಯ ಸರ್ಕಾರ ಹೊಸದಾಗಿ ‘ಮನೆ ಮನೆಗೆ ಪೊಲೀಸ್ ಭೇಟಿ’ ಕಾರ್ಯಕ್ರಮ ಜಾರಿಗೊಳಿಸಿದೆ. ಈ ನಿಮಿತ್ತ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ಪೊಲೀಸರು ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಂಗವಾಗಿ ಪೊಲೀಸ್ ಪೇದೆಗಳಾದ ರಂಗನಾಥ್ ಮತ್ತು ದಯಾನಂದ್ ದೊಡ್ಡೇರಿ ಗ್ರಾಮದ ಮುದ್ದಮ್ಮ ಎಂಬುವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ನಿಮಗೆ ಸಮಸ್ಯೆ ಏನಾದರೂ ಇದೆಯಾ ಎಂದು ಪೊಲೀಸರು ಕೇಳಿದಾಗ, ವಿದ್ಯಾವಂತರಾಗಿ ಸರ್ಕಾರಿ ನೌಕರಿಯಲ್ಲಿರುವವರಿಗೆ ಹಾಗೂ ಸಾಕಷ್ಟು ಆಸ್ತಿ ಹೊಂದಿರುವವರಿಗೆ ಹೆಣ್ಣು ಕೊಡಲು ಮುಂದೆ ಬರುತ್ತಾರೆ. ಆದರೆ, ನೆಲವನ್ನೇ ದೇವರೆಂದು ನಂಬಿ ಕೃಷಿ ಕೆಲಸ ಮಾಡುತ್ತಿರುವವರಿಗೆ, ಬಡವರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ತಮ್ಮ ಮನದ ಅಳಲನ್ನು ತೋಡಿಕೊಂಡರು. ನನ್ನ ಮಗನಿಗೆ ಹೆಣ್ಣು ಹುಡುಕಿ ಕೊಡಿ ಎಂದು ಮನವಿ ಮಾಡಿದರು.
ಮುದ್ದಮ್ಮನ ಹೇಳಿಕೆಯನ್ನು ಸಮಚಿತ್ತದಿಂದ ಆಲಿಸಿದ ಪೇದೆಗಳು, ನಿನ್ನ ಮಗನಿಗೆ ಹೆಣ್ಣು ಹುಡುಕಿ ಕೊಡುವ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರು ಏನು ಮಾಡುತ್ತಾರೋ ಕಾದು ನೋಡೋಣ ಎಂದು ಉತ್ತರಿಸಿದ್ದಾರೆ. ನಂತರ, ಮನೆಯ ಬಳಿ ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಗಳು ಏನಾದರೂ ಇವೆಯೇ ಎಂದು ಕೇಳಿದಾಗ, ನಮಗೆ ಯಾವುದೇ ಸಮಸ್ಯೆಗಳಿಲ್ಲವೆಂದು ಮುದ್ದಮ್ಮ ಉತ್ತರಿಸಿದ್ದಾರೆ.ಗ್ರಾಮೀಣ ಪ್ರದೇಶದ ಈ ಮಹಿಳೆಯು ಮುಗ್ದತೆಯಿಂದ ಮಗನಿಗೆ ಮದುವೆಯಾಗಲು ಒಂದು ಹೆಣ್ಣು ನೋಡಿ ಎಂದು ಪೊಲೀಸರಿಗೆ ಮನವಿ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.