ಹೂವಿನಹಡಗಲಿ: ನಮ್ಮೂರಿನ ಸ್ಮಶಾನಕ್ಕೆ ಶವಗಳನ್ನು ಹೊತ್ತೊಯ್ಯಲು 64 ವರ್ಷಗಳಿಂದ ದಾರಿಗಾಗಿ ಅರ್ಜಿ ಸಲ್ಲಿಸಿ ಕಚೇರಿಗೆ ಅಲೆದು ರೋಸಿ ಹೋಗಿದ್ದೇವೆ. ಮಳೆಗಾಲದಲ್ಲಿ ನದಿ ತೀರದ ಕೆಸರಿನಲ್ಲೇ ಹೆಣ ಸುಡುತ್ತೇವೆ. ನಮ್ಮ ಪಾಡು ಆ ದೇವರಿಗೆ ಪ್ರೀತಿ, ನೀವಾದರೂ ಗಮನ ಹರಿಸಿ ಎಂದು ನವಲಿ ಜನ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ ಮುಂದೆ ಪರಿ ಪರಿಯಾಗಿ ಬೇಡಿಕೊಂಡ ಪ್ರಸಂಗ ಜರುಗಿತು.
ಅಕ್ಕಪಕ್ಕದ ರೈತರ ಮನವೊಲಿಸುವುದು ಇಲ್ಲವೇ ಸರ್ಕಾರದ ಕಾಯ್ದೆ ಬಳಸಿ ಸ್ಮಶಾನಕ್ಕೆ ದಾರಿ ಮಾಡಿ ಕೊಡುತ್ತೇವೆಂದು ಎಡಿಸಿ ಪಿ.ಎನ್.ಲೋಕೇಶ ಭರವಸೆ ನೀಡಿದರು.
ನವಲಿ ಸರ್ಕಾರಿ ಶಾಲೆಗೆ ಕೋಣೆ, ಶಿಕ್ಷಕರ ಕೊರತೆ ನೀಗಿಸಬೇಕು, ಹಕ್ಕು ಪತ್ರ ಮಂಜೂರಾಗಿವೆ ಆದರೆ ಫಲಾನುಭವಿಗಳಿಗೆ ಸಿಕ್ಕಿಲ್ಲ ಹೀಗೆ ಹತ್ತಾರು ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಕೆಯಾದವು.ನಾನು ಬಡವಿ ನನಗೆ ಹಿಂದೂ-ಮುಂದೂ ಯಾರು ಇಲ್ಲ, ಸರ್ಕಾರದ ಸೆರ ಅಕ್ಕಿನೂ ಸಿಗುತ್ತಿಲ್ಲ, ರೊಕ್ಕನೂ ಬರುತ್ತಿಲ್ಲ ಹೊಟ್ಟೆ ಹೊರೆಯಲು ಭಿಕ್ಷೆ ಬೇಡುತ್ತಿರುವೆ, ನನಗೆ ಅಕ್ಕಿ ಕೊಡಿಸಿ ಎಂದು ಜಮಾಲ್ ಬೀ ಎಂಬ ವಯೋವೃದ್ಧೆ ಅಧಿಕಾರಿಗಳ ಬಳಿ ಹಳೆ ಪಡಿತರ ಕಾರ್ಡ್ ಹಿಡಿದುಕೊಂಡು ಕಣ್ಣೀರಿಟ್ಟ ಪ್ರಸಂಗ ಜರುಗಿತು.
ಸಭೆಗೆ ಅರ್ಜಿ ಹಿಡಿದು ಬಂದ ಮಾಜಿ ಶಾಸಕ: ತಾಲೂಕಿನ 26 ಗ್ರಾಪಂ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಜನರಿಗೆ, ಹಕ್ಕು ಪತ್ರ ವಿತರಣೆ, ಗ್ರಾಮ ಠಾಣಾ ವಿಸ್ತರಣೆ, ಕಂದಾಯ ಉಪ ಗ್ರಾಮ ಘೋಷಣೆ, ಸ್ವಂತ ಪಟ್ಟಾದಾರರ ಜಮೀನಿನಲ್ಲಿರುವ ನಿವೇಶನಗಳಿಗೆ, ಇ ಸ್ವತ್ತು ನೀಡಲು ಕ್ರಮ ವಹಿಸಬೇಕು, ಇಂತಹ 114 ಪ್ರಕರಣಗಳಿವೆ ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಎಡಿಸಿ ಪಿ.ಎನ್.ಲೋಕೇಶ ಇವರಿಗೆ ಅರ್ಜಿ ಸಲ್ಲಿಸಿ ಸಮಸ್ಯೆ ಬಗೆ ಹರಿಸುವಂತೆ ಚರ್ಚಿಸಿದರು.
ತಾಪಂ- 20, ಲೋಕೋಪಯೋಗಿ ಇಲಾಖೆ-1, ಜೆಸ್ಕಾಂ-2, ಶಿಕ್ಷಣ -2, ಕಂದಾಯ-10 ಅರ್ಜಿಗಳು ಸೇರಿ ಒಟ್ಟು 35 ಅರ್ಜಿ ಸಲ್ಲಿಕೆಯಾಗಿದ್ದವು.
ಜಿಪಂ ಉಪಕಾರ್ಯದರ್ಶಿ ಕೆ. ತಿಮ್ಮಪ್ಪ, ಕೃಷಿ ಜೆಡಿ ಜೆ.ಟಿ. ಮಂಜುನಾಥ, ತೋಟಗಾರಿಕೆ ಇಲಾಖೆ ಪ್ರಭುರಾಜ, ರೇಷ್ಮೇ ಇಲಾಖೆಯ ಶ್ರೀಹರ್ಪ, ಪಶು ಇಲಾಖೆಯ ಶರಣಗೌಡ, ಮೀನುಗಾರ ಇಲಾಖೆಯ ಮಲ್ಲೇಶನಾಯ್ಕ, ತಹಸೀಲ್ದಾರ್ ಕೆ.ಎಂ.ಗುರುಬಸವರಾಜ, ತಾಪಂ ಇಒ ಜಿ.ಪರಮೇಶ್ವರ ಸೇರಿದಂತೆ ಇತರರಿದ್ದರು.