ಹಾನಗಲ್ಲ: ಕುಡಿಯುವ ನೀರಿನ ಸಮಸ್ಯೆ ಏ. ೧೫ರ ಹೊತ್ತಿಗೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ಎಲ್ಲೆಲ್ಲಿ ಈಗಾಗಲೇ ಸಮಸ್ಯೆ ಉಲ್ಬಣಿಸಿದೆಯೋ ಅಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಮನ ಹರಿಸಿ. ಗ್ರಾಮಸಭೆ ಕರೆದು ಗ್ರಾಮಸ್ಥರ ಸಹಕಾರ ಪಡೆದುಕೊಳ್ಳಿ. ನೀರಿನ ಅಪವ್ಯಯ ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸಿ. ಕೆಲವೆಡೆ ವ್ಯರ್ಥವಾಗಿ ಹರಿದು ನೀರು ಚರಂಡಿ ಸೇರುತ್ತಿದೆ. ಕೂಡಲೇ ನಿಯಂತ್ರಿಸಿ ಎಂದು ಶ್ರೀನಿವಾಸ ಮಾನೆ ಸೂಚನೆ ನೀಡಿದರು.
ಸ್ಥಳೀಯ ಮಠಾಧೀಶರು, ಗಣ್ಯರೊಂದಿಗೆ ಸಂಪರ್ಕ ಸಾಧಿಸಿ ವಾಸ್ತವ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಿ. ಮಳೆ ಬಿದ್ದು ಸಮಸ್ಯೆಗೆ ಪರಿಹಾರ ಸಿಗುವ ವರೆಗೂ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ. ನಿರ್ಲಕ್ಷ್ಯ ವಹಿಸುವ, ಬೇಜವಾಬ್ದಾರಿ ಪ್ರದರ್ಶಿಸುವರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು.ತಹಸೀಲ್ದಾರ್ ಎಸ್. ರೇಣುಕಮ್ಮ, ತಾಪಂ ಇಒ ದೇವರಾಜ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಎಇಇ ಆರ್.ಸಿ. ನೆಗಳೂರ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗಿರೀಶ ರೆಡ್ಡೇರ, ಉಪ ತಹಸೀಲ್ದಾರರಾದ ಎಂ.ಎಸ್. ಮುಗದುಂ, ಟಿ.ಕೆ. ಕಾಂಬ್ಳೆ ಈ ಸಂದರ್ಭದಲ್ಲಿ ಇದ್ದರು.