ಪಾವತಿಯಾಗದ ಕೊಟ್ಟಿಗೆ ಶೆಡ್‌ ಬಿಲ್‌, ಲಕ್ಕಲಕಟ್ಟಿ ಗ್ರಾಪಂ ಎದುರು ದನಗಳ ಕಟ್ಟಿ ಪ್ರತಿಭಟನೆ

KannadaprabhaNewsNetwork | Published : Mar 9, 2024 1:33 AM

ಸಾರಾಂಶ

ಕಳೆದ ಕೆಲ ವರ್ಷಗಳಿಂದ ದನದ ದೊಡ್ಡಿ ಬಿಲ್ ಪಾವತಿಸಲು ಗ್ರಾಪಂ ಅಧಿಕಾರಿಗಳು ಹಾಗೂ ಆಡಳಿತ ಮೀನಮೇಷ ಮಾಡುತ್ತಿದೆ ಎಂದು ಆರೋಪಿಸಿ ಲಕ್ಕಲಕಟ್ಟಿ ಗ್ರಾಪಂ ಕಾರ್ಯಾಲಯದ ಎದುರು ದನಗಳನ್ನು ಕಟ್ಟಿ ಪ್ರತಿಭಟಿಸಿದ ಘಟನೆ ನಡೆದಿದೆ.

ಗಜೇಂದ್ರಗಡ: ಕಳೆದ ಕೆಲ ವರ್ಷಗಳಿಂದ ದನದ ದೊಡ್ಡಿ ಬಿಲ್ ಪಾವತಿಸಲು ಗ್ರಾಪಂ ಅಧಿಕಾರಿಗಳು ಹಾಗೂ ಆಡಳಿತ ಮೀನಮೇಷ ಮಾಡುತ್ತಿದೆ ಎಂದು ಆರೋಪಿಸಿ ಲಕ್ಕಲಕಟ್ಟಿ ಗ್ರಾಪಂ ಕಾರ್ಯಾಲಯದ ಎದುರು ದನಗಳನ್ನು ಕಟ್ಟಿ ಪ್ರತಿಭಟಿಸಿದ ಘಟನೆ ನಡೆದಿದೆ.ಸಮೀಪದ ಲಕ್ಕಲಕಟ್ಟಿ ಗ್ರಾಮ ಪಂಚಾಯತ್ ಕಾರ್ಯಾಲಯದ ಕೂಗಳತೆಯ ದೂರದಲ್ಲಿ ಕೆಲ ವರ್ಷಗಳ ಹಿಂದೆ ಗ್ರಾಮದ ವೀರಯ್ಯ ಗುರುನಂಜಯ್ಯನಮಠ ಎಂಬುವವರು ಅಂದಾಜು ರು. ೫೭ ಸಾವಿರ ವೆಚ್ಚದಲ್ಲಿ ದನದ ದೊಡ್ಡಿ ನಿರ್ಮಿಸಿಕೊಂಡಿದ್ದರು. ಹೀಗಾಗಿ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ದನದ ದೊಡ್ಡಿಯ ಬಿಲ್ ಪಾವತಿಸಿ ಎಂದು ಗ್ರಾಪಂ ಅಧ್ಯಕ್ಷರಿಂದ ಹಿಡಿದು ಸದಸ್ಯರು ಹಾಗೂ ಪಿಡಿಒ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಸರಿಯಾದ ಸ್ಪಂದನೆ ದೊರೆತಿಲ್ಲ. ಅಲ್ಲದೆ ಈ ಹಿಂದೆ ಕೋಳಿ ಫಾರ್ಮ್ ಸಹ ನಿರ್ಮಿಸಿರುವೆ. ಅದರ ಬಿಲ್ ಸಹ ಪಾವತಿಯಾಗಲಿಲ್ಲ.

ಹೀಗಾಗಿ ಗ್ರಾಪಂ ಕಾರ್ಯಾಲಯದ ಎದುರು ದನಗಳನ್ನು ಕಟ್ಟಿ ಪ್ರತಿಭಟನೆಗೆ ಮುಂದಾದರೆ ಗ್ರಾಪಂ ಅಧಿಕಾರಿ ಅಥವಾ ಜನಪ್ರತಿನಿಧಿಯೂ ಸಹ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಲು ಮುಂದಾಗಲಿಲ್ಲ ಎಂಬ ಅಸಮಾಧಾನವನ್ನು ಹಂಚಿಕೊಂಡಿರುವ ಪ್ರತಿಭಟನಾಕಾರ ವೀರಯ್ಯ ಅವರು, ೩ ದಿನಗಳ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಗ್ರಾಪಂ ಎದುರು ಕಟ್ಟಿದ್ದ ದನಗಳನ್ನು ಮತ್ತೆ ಜಮೀನಿಗೆ ಕರೆದುಕೊಂಡು ಬಂದಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ತಿಳಿಸಿದ್ದಾರೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಕೆಲ ದನದ ದೊಡ್ಡಿಗಳಲ್ಲಿ ದನಗಳು ಇರುತ್ತವೇ ಇಲ್ಲವೇ ಎನ್ನುವುದನ್ನು ಸಂಬಂಧಿಸಿದವರು ಭೇಟಿ ನೀಡಿ ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ. ಗ್ರಾಮದಲ್ಲಿನ ಎಲ್ಲ ವಿಷಯಗಳನ್ನು ನಾನು ಮಾತನಾಡುವದಿಲ್ಲ. ನಮ್ಮ ಜಮೀನಿನಲ್ಲಿ ನಿರ್ಮಿಸಿದ ದನದ ದೊಡ್ಡಿಯ ಬಿಲ್ ಪಾವತಿಸಿ ಎಂದು ಪಿಡಿಒ ಕೇಳಿದರೆ ಎಂಜಿನಿಯರ್ ಬಂದಿಲ್ಲ ಎನ್ನುವುದು, ಎಂಜಿನಿಯರ್ ಬಂದಾಗ ಪಿಡಿಒ ಇರಲ್ಲ, ಇವರಿಬ್ಬರೂ ಇದ್ದಾಗ ಸಹಿ ಮಾಡಲು ಅಧ್ಯಕ್ಷರು ಇಲ್ಲ ಎನ್ನುವ ಉತ್ತರಗಳಿಂದ ಬೇಸತ್ತು ಗ್ರಾಪಂ ಎದುರು ದನಗಳನ್ನು ಕಟ್ಟಿ ಪ್ರತಿಭಟನೆ ಮಾಡಿದ್ದೇನೆ. ಹೀಗಾಗಿ ಸೋಮವಾರದೊಳಗೆ ನಮ್ಮ ಜಮೀನಿನಲ್ಲಿ ಕಟ್ಟಿಕೊಂಡಿರುವ ದನದ ದೊಡ್ಡಿಯ ಬಿಲ್‌ನ್ನು ಪಾವತಿಸಲು ಅಧಿಕಾರಿಗಳು ಹಾಗೂ ಆಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಗ್ರಾಪಂ ಎದುರು ಪ್ರತಿಭಟನೆಗೆ ಮುಂದಾಗುತ್ತೇನೆ ಎಂದು ಪ್ರತಿಭಟನಾಕಾರ ವೀರಯ್ಯ ಗುರುನಂಜಯ್ಯನಮಠ ಎಚ್ಚರಿಸಿದರು. "ತಾಲೂಕಿನ ಲಕ್ಕಲಕಟ್ಟಿ ಗ್ರಾಮ ಪಂಚಾಯತ್ ಎದುರು ದನಗಳನ್ನು ಕಟ್ಟಿ ಪ್ರತಿಭಟಿಸಿದ ಕುರಿತು ಮಾಹಿತಿ ಪಡೆಯಲು ಲಕ್ಕಲಕಟ್ಟಿ ಗ್ರಾಮದ ಪಿಡಿಒ ಮಂಜುನಾಥ ಪಾಟೀಲ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ. "

Share this article