ಬಳ್ಳಾರಿಯಲ್ಲಿನ್ನು ಹೆಲ್ಮೆಟ್ ಧರಿಸದಿದ್ದರೆ ದಂಡ ನಿಶ್ಚಿತ

KannadaprabhaNewsNetwork |  
Published : Jun 07, 2025, 03:24 AM IST
ಹೆಲ್ಮೆಟ್ ಬಳಕೆ ಕುರಿತು ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಎಸ್ಪಿ ಡಾ.ಶೋಭಾರಾಣಿ ಅವರು ಜನರಿಗೆ ಹೆಲ್ಮೆಟ್ ವಿತರಣೆ ಮಾಡಿದರು.  | Kannada Prabha

ಸಾರಾಂಶ

ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನ ವೃತ್ತದಲ್ಲಿ ಶುಕ್ರವಾರ ಸಾರ್ವಜನಿಕರ ಸುರಕ್ಷತೆಗಾಗಿ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್ಪಿ ಡಾ. ಶೋಭಾರಾಣಿ ಅವರು ಸಾರ್ವಜನಿಕರಿಗೆ ಹೆಲ್ಮೆಟ್ ಮತ್ತು ಗುಲಾಬಿ ಹೂ ವಿತರಿಸಿದರು.

ಬಳ್ಳಾರಿ: ಜೀವ ಸುರಕ್ಷತೆಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ತಪ್ಪದೆ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಹೇಳಿದರು.

ನಗರದ ಕನಕ ದುರ್ಗಮ್ಮ ದೇವಸ್ಥಾನ ವೃತ್ತದಲ್ಲಿ ಎಸ್ಪಿ ಶುಕ್ರವಾರ ಆಯೋಜಿಸಲಾಗಿದ್ದ ಸಾರ್ವಜನಿಕರ ಸುರಕ್ಷತೆಗಾಗಿ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಮತ್ತು ಗುಲಾಬಿ ಹೂ ವಿತರಿಸಿ ಅವರು ಮಾತನಾಡಿದರು. ಬಳ್ಳಾರಿ ಜನರಿಗೆ ಹೆಲ್ಮೆಟ್‌ನಿಂದ ವಿನಾಯಿತಿ ನೀಡಲಾಗಿದೆ ಎಂಬುದು ಸುಳ್ಳು. ಯಾರಿಗೂ ವಿನಾಯಿತಿ ಇರುವುದಿಲ್ಲ. ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಓಡಾಡುವಂತಿಲ್ಲ. ಓಡಾಡಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳ ಅಪಘಾತವೇ ಹೆಚ್ಚು. ಅದರಲ್ಲಿ ಹೆಲ್ಮೆಟ್ ಧರಿಸದೆ ಮೃತಪಟ್ಟವರ ಸಂಖ್ಯೆ ಹೇರಳವಾಗಿದೆ. ಆ ವೇಳೆ ತಲೆಗೆ ಪೆಟ್ಟಾಗಿ ಅಸು ನೀಗುವವರು ಹೆಚ್ಚಾಗಿದ್ದಾರೆ. ಇದಕ್ಕೆ ಹೆಲ್ಮೆಟ್ ಧರಿಸದಿರುವುದೇ ಮುಖ್ಯ ಕಾರಣ. ಹಾಗಾಗಿ ನಿಮ್ಮ ಮನೆಯವರು ಹಾಗೂ ನಿಮ್ಮನ್ನು ನಂಬಿದವರಿಗಾಗಿ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಲೇಬೇಕು ಎಂದು ಹೇಳಿದರು.

ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದರಿಂದ ಸಂಭವನೀಯ ಅಪಘಾತಗಳಿಂದ ತಲೆಗೆ ಪೆಟ್ಟಾಗುವುದು ತಪ್ಪುತ್ತದೆ. ಪೊಲೀಸರು ನೀಡುವ ಸೂಚನೆಗಳನ್ನು ಅಗತ್ಯವಾಗಿ ಪಾಲಿಸಬೇಕು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಸ್ಥಳದಲ್ಲಿಯೇ ₹500 ದಂಡ ತೆರಬೇಕಾಗುತ್ತದೆ. 18 ವರ್ಷದ ಒಳಗಿನವರು ವಾಹನ ಚಲಾಯಿಸುವುದು ಕೂಡ ಅಪರಾಧ. ಹಾಗಾಗಿ ಕಡ್ಡಾಯವಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದರು.

ಸುರಕ್ಷತೆಗಾಗಿ ಹೆಲ್ಮೆಟ್ ಧರಿಸೋಣ: ದ್ವಿಚಕ್ರ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಹೆಲ್ಮೆಟ್ ಬಳಸುವ ರೂಢಿಯಾಗಬೇಕೆಂದರೆ ಅಧಿಕಾರಿಗಳು ಸೇರಿದಂತೆ ನಾವೆಲ್ಲರೂ ನಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಅವರು ಮಾಧ್ಯಮ ಪ್ರತಿನಿಧಿಗಳ ಸಂವಾದದಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಅತಿಯಾಗ ವೇಗದಿಂದ ವಾಹನ ಚಾಲನೆ, ಮದ್ಯ ಸೇವಿಸಿ-ವಾಹನ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತ ಮತ್ತು ಸಾವು ಸಂಭವಿಸುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದಲೇ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಹಾಗೂ ಹಿಂಬದಿಯ ಸವಾರರು ಸಹ ತಪ್ಪದೇ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.

ಹೆಲ್ಮೆಟ್ ಧರಿಸುವ ಕುರಿತು ನಮ್ಮಿಂದಲೇ ಪ್ರಾರಂಭಿಸಿದರೆ ಸಾರ್ವಜನಿಕರು ಸಹ ದ್ವಿಚಕ್ರ ವಾಹನ ಸಂಚಾರದಲ್ಲಿ ಸುರಕ್ಷತೆಗಾಗಿ ಹೆಲ್ಮೆಟ್ ಬಳಕೆ ಕುರಿತು ಸಂದೇಶ ರವಾನಿಸಿದಂತಾಗುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಹೆಲ್ಮೆಟ್ ಬಳಸೋಣ ಎಂದರು.

ಜಿಲ್ಲೆಯಲ್ಲಿ ವಾಹನ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸುವಿಕೆಯ ಕುರಿತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು. ಪೊಲೀಸರ ಭಯದ ಕಾರಣಕ್ಕೆ ಯಾರೂ ಹೆಲ್ಮೆಟ್ ಧರಿಸಬೇಕಿಲ್ಲ. ಬದಲಾಗಿ ತಮ್ಮ ಸುರಕ್ಷತೆಗಾಗಿ ಸಾರ್ವಜನಿಕರು ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.

ಹೆಲ್ಮೆಟ್ ಬಳಕೆಯ ಕುರಿತು ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹೆಚ್ಚುವರಿ ಎಸ್ಪಿಗಳಾದ ನವೀನ್ ಕುಮಾರ್, ರವಿಕುಮಾರ್, ಬಳ್ಳಾರಿ ನಗರ ಉಪವಿಭಾಗ ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ, ಸಂಚಾರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅಯ್ಯನಗೌಡ ಪಾಟೀಲ್ ಇತರರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ