ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮದ್ದೂರು ವಲಯದ ಹುಲಿಕಟ್ಟೆ ಕಳ್ಳಬೇಟೆ ಶಿಬಿರದ ಬಳಿ ರೌಡಿಶೀಟರ್ ಮಹದೇವ್ ಪ್ರಸಾದ್ ಸೇರಿದಂತೆ ಮೂವರು ಸಹಚರರು ಮೋಜು ಮಸ್ತಿ ಮಾಡಿದ್ದಕ್ಕಾಗಿ ಅರಣ್ಯ ಇಲಾಖೆ ಕೊನೆಗೂ ಪ್ರಕರಣ ದಾಖಲಿಸಿದೆ. ಜೊತೆಗೆ ಕರ್ತವ್ಯಲೋಪಕ್ಕಾಗಿ ಮದ್ದೂರು ವಲಯದ ಅರಣ್ಯಾಧಿಕಾರಿ ಪುನೀತ್ ಕುಮಾರ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್. ನಂದೀಶ್ ಅವರು ವರದಿ ನೀಡಿದ್ದಾರೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಏನಿದು ಘಟನೆ?
ಇತ್ತೀಚೆಗೆ ರೌಡಿಶೀಟರ್ ಮಹದೇವ್ ಪ್ರಸಾದ್ ಮತ್ತು ಆತನ ಸ್ನೇಹಿತರಾದ ಗುಂಡ್ಲುಪೇಟೆಯ ಗಂಗಾಧರ, ಕಗ್ಗಳ ಗ್ರಾಮದ ಚೇತನ್ ಹುಲಿಕಟ್ಟೆ ಕಳ್ಳಬೇಟೆ ಶಿಬಿರದಲ್ಲಿ ಅಕ್ರಮವಾಗಿ ಪ್ರವೇಶಿಸಿ ಮದ್ಯ ಸೇವಿಸಿ ಮೋಜು ಮಸ್ತಿ ಮಾಡಿದ್ದರು. ಇದರ ಚಿತ್ರ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮೂವರ ವಿರುದ್ಧ ಹಾಗೂ ಅರಣ್ಯ ಇಲಾಖೆ ವಿರುದ್ಧ ಸಾಕಷ್ಟು ಆಕ್ರೋಶ ಹೊರಹೊಮ್ಮಿತ್ತು. ಇದರಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆಯು ಮೂವರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ಸಂರಕ್ಷಿತ ಅರಣ್ಯದೊಳಗೆ ಅತಿಕ್ರಮ ಪ್ರವೇಶ, ಕಾಡು ಪ್ರಾಣಿಗಳಿಗೆ ಹಿಂಸೆಯನ್ನು ಉಲ್ಲೇಖಿಸಿ ಅರಣ್ಯಾಧಿಕಾರಿ ಪುನೀತ್ ಕುಮಾರ್ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನು ಸಲ್ಲಿಸಿದ್ದಾರೆ. ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
---ಆರ್‌ಎಫ್‌ಓ ಮೇಲೆ ಕ್ರಮಕ್ಕೆ ಶಿಫಾರಸು
ಗುಂಡ್ಲುಪೇಟೆ: ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್ ಕುಮಾರ್ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿದ್ದಾರೆ ಕ್ರಮ ಜರುಗಿಸಬೇಕು ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್. ನಂದೀಶ್ ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್) ವರದಿ ನೀಡಿದ್ದಾರೆ ಎನ್ನಲಾಗಿದೆ.
ರೌಡಿಶೀಟರ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ಪುನೀತ್ ಕುಮಾರ್ ಅವರ ನಿರ್ಲಕ್ಷ್ಯತೆ ಹಾಗೂ ಕರ್ತವ್ಯಲೋಪ ಎದ್ದು ಕಾಣುತ್ತದೆ ಎಂದು ಗುಂಡ್ಲುಪೇಟೆ ಉಪ ವಿಭಾಗದ ಎಸಿಎಫ್ ಕೆ. ಸುರೇಶ್ ಅವರು ಡಿಸಿಎಫ್ ನಂದೀಶ್ ಅವರಿಗೆ ವರದಿ ನೀಡಿದ ಬೆನ್ನಲ್ಲೇ ನಂದೀಶ್ ಅವರು ಪಿಸಿಸಿಎಫ್‌ಗೆ ವರದಿ ಕಳುಹಿಸಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.