ಹೊಸ ಸೇತುವೆ ನಿರ್ಮಾಣಕ್ಕೆ 40 ಕೋಟಿ ರು. ಬಿಡುಗಡೆ: ಶಾಸಕ ಎಸ್.ಎನ್. ಚನ್ನಬಸಪ್ಪ

KannadaprabhaNewsNetwork |  
Published : Jun 07, 2026, 01:30 AM IST
ಪೊಟೋ: 06ಎಸ್‌ಎಂಜಿಕೆಪಿ02ಶಿವಮೊಗ್ಗ ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಸುಮಾರು 150 ವರ್ಷಗಳಷ್ಟು ಹಳೆಯದಾಗಿರುವ ತುಂಗಾ ಸೇತುವೆ ಶಿಥಿಲವಾಗಿದ್ದು, ಹೊಸ ಸೇತುವೆ ನಿರ್ಮಾಣಕ್ಕಾಗಿ 40 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇದಕ್ಕಾಗಿ ಸಹಕರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸುಮಾರು 150 ವರ್ಷಗಳಷ್ಟು ಹಳೆಯದಾಗಿರುವ ತುಂಗಾ ಸೇತುವೆ ಶಿಥಿಲವಾಗಿದ್ದು, ಹೊಸ ಸೇತುವೆ ನಿರ್ಮಾಣಕ್ಕಾಗಿ 40 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇದಕ್ಕಾಗಿ ಸಹಕರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2019ರಲ್ಲಿ ಶಿವಮೊಗ್ಗದಲ್ಲಿ ತುಂಬಾ ಮಳೆ ಬಂದು, ಅನೇಕ ಸಮಸ್ಯೆ ಎದುರಿಸಿದ್ದೆವು. ಆಗ ತುಂಗಾ ನದಿ ಹಳೆ ಸೇತುವೆ ಬಿರುಕು ಬಿಡ್ತಾ ಇದೆ ಎಂಬ ಆತಂಕ. ಅಲ್ಲಿ ಭಾರೀ ವಾಹನ ಬಿಡಬಾರದು ಎಂದು ಅವತ್ತೇ ನಿರ್ಧಾರ ಆಗಿತ್ತು. ಅವತ್ತಿನಿಂದಲೇ ವಿಶೇಷವಾದ ಪ್ರಯತ್ನ ಮಾಡಿದ ಪರಿಣಾಮ ನಾಗರಿಕರಿಗೆ ಹೊಸ ಸೇತುವೆಯ ನಿರೀಕ್ಷೆ ಸಫಲವಾಗುವ ಸನಿಹಕ್ಕೆ ಬಂದು ನಿಂತಿದೆ ಎಂದರು.

ಬಹಳ ಮುಖ್ಯವಾಗಿ ಶಿವಮೊಗ್ಗಕ್ಕೆ ಹೊಸ ಸೇತುವೆ ನಿರ್ಮಾಣಕ್ಕೆ ಈಗಿನ ಮತ್ತು ಆಗಿನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೇ ಕಾರಣ. ಅವರು ವಿಶೇಷ ಆಸಕ್ತಿ ವಹಿಸಿದರು. ಸುಮಾರು 6 ಬಾರಿ ಅವರನ್ನು ಭೇಟಿ ಮಾಡಿದೆ. ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ. ಪರಿಣಾಮ, 40 ಕೋಟಿ ಬಿಡುಗಡೆ ಆಗಿದೆ ಎಂದರು.

ಸತೀಶ್ ಜಾರಕಿಹೊಳಿ ಅವರು ಶಿವಮೊಗ್ಗಕ್ಕೆ ಬಂದ ಸಂದರ್ಭದಲ್ಲಿ ಅವರು ಒಂದು ಮಾತು ಹೇಳಿದ್ದರು. ನಿತಿನ್ ಗಡ್ಕರಿ ಅವರು ಬಂದಿದ್ದ ವೇಳೆ ಭರವಸೆ ನೀಡಿದ್ದರು. ಅದು ಈಗ ಈಡೇರಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ನಾಗರಿಕರ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದರು.

ಯಾವುದೇ ಸರ್ಕಾರ ಇದ್ದರೂ ಕೂಡ ನಾವು ಆ ಸರ್ಕಾರದ ಜೊತೆ ಸ್ಪಂದನೆ ನಡೆಸಿದಾಗ ಮತ್ತು ಸರ್ಕಾರದ ಸಚಿವರಿಗೆ ಇಚ್ಛಾಶಕ್ತಿ ಇದ್ದಾಗ ಈ ರೀತಿಯ ಒಳ್ಳೆಯ ಕೆಲಸಗಳು ಆಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಶಿವಮೊಗ್ಗದ ಬಗ್ಗೆ ಅಭಿಮಾನ ಇಟ್ಟುಕೊಂಡು ನನ್ನ ಸ್ಪಂದನೆಗೆ ಸ್ಪಂದಿಸಿದ್ದಾರೆ. ಇನ್ನು 3 ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಉಳಿದಂತೆ ಈಗಿರುವ ಹಳೆ ಸೇತುವೆಯನ್ನು ಸಂಪೂರ್ಣವಾಗಿ ಕೆಡವಿ ಹೊಸ ಸೇತುವೆ ನಿರ್ಮಾಣವಾಗಿ ಶಿವಮೊಗ್ಗ ಜನರ ಕನಸು ನನಸಾಗಲಿದೆ. ಮತ್ತೊಮ್ಮೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಾರಕಿಹೊಳಿ ಅವರಿಗೆ ಅಭಿನಂದನೆಗಳು ಎಂದು ಮುಕ್ತಕಂಠದಿಂದ ಶಾಸಕರು ಪ್ರಶಂಸಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ದೀನದಯಾಳ್, ನಾಗರಾಜ್, ಪ್ರಭಾಕರ್, ಮಂಜುನಾಥ್ ನವುಲೆ, ಪ್ರಭು, ಶ್ರೀನಾಗ್ ಇದ್ದರು.

------

ಶಿವಮೊಗ್ಗ: ರಾಜ್ಯ ಸರ್ಕಾರ ಸಾಮಾಜಿಕ ಭದ್ರತೆಯ ಮಾಸಿಕ ಪಿಂಚಣಿ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ. ಇದು ಬಡಜನರಿಗೆ ಮಾಡಿದ ದ್ರೋಹ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆದಾಯ ಮಿತಿ ಮತ್ತು ಇನ್ನಿತರ ಕಾರಣಕ್ಕಾಗಿ ಮಾನವೀಯತೆಯನ್ನು ಬಿಟ್ಟು ಬಡವರಿಗೆ ಸಿಗುತ್ತಿದ್ದ ಮಾಸಿಕ ಪಿಂಚಣಿಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ. ಯಾವುದೇ ಸರ್ಕಾರ ಸಾಮಾಜಿಕ ಭದ್ರತೆಯ ಹಿನ್ನೆಲೆಯಲ್ಲಿ ಹಲವು ಯೋಜನೆಗಳನ್ನು ರೂಪಿಸುತ್ತದೆ. ಆದರೆ, ಈ ಸರ್ಕಾರ ಈಗ ಸಂಧ್ಯಾ ಸುರಕ್ಷಾ, ಅಂಗವಿಕಲರು, ಅವಿವಾಹಿತೆಯರಿಗೆ ನೀಡುವ ಮನಸ್ವಿನಿ ಯೋಜನೆ, ಮಂಗಳಮುಖಿಯರಿಗೆ ಪಿಂಚಣಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 59,847 ಜನರಿಗೆ ಪಿಂಚಣಿ ಸ್ಥಗಿತವಾಗಿದೆ. ಶಿವಮೊಗ್ಗ ನಗರವೊಂದರಲ್ಲಿಯೇ ನಿರ್ಗತಿಕ, ಸಂಧ್ಯಾ ಸುರಕ್ಷಾ, ಹಿರಿಯ ನಾಗರಿಕ, ಅಂಗವಿಕಲ ಸೇರಿದಂತೆ ಸುಮಾರು 5603 ಜನರಿಗೆ ಪಿಂಚಣಿ ನಿಲ್ಲಿಸಲಾಗಿದೆ. ಇದರ ಮೊತ್ತ 56 ಲಕ್ಷ ರು. ಆಗುತ್ತಿತ್ತು. ಮೂರು ತಿಂಗಳಿಂದ ತಡೆಹಿಡಿಯಲಾಗಿದೆ. ಪ್ರತಿ ತಿಂಗಳು 5.98 ಲಕ್ಷ ರು. ಆಗುತ್ತಿತ್ತು. ಮಂಗಳಮುಖಿಯರು ಕೇವಲ 4 ಜನರಿದ್ದು, ಅವರಿಗೂ ಕೂಡ ಮಾಸಾಶನ ನಿಲ್ಲಿಸಲಾಗಿದೆ. ಇದು ಅತ್ಯಂತ ನೋವಿನ ಸಂಗತಿ ಎಂದರು.

ಪಿಂಚಣಿದಾರರ ವಾರ್ಷಿಕ ಆದಾಯಮಿತಿಯನ್ನು ಕೇವಲ 32 ಸಾವಿರ ರು.ಗೆ ನಿಗದಿಪಡಿಸಲಾಗಿದೆ. ಇದು ಅವೈಜ್ಞಾನಿಕವಾಗಿದೆ. ಅನೇಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಣ್ಣಪುಟ್ಟ ಮನೆಗಳ ದುರಸ್ತಿಗೆ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಸಂದರ್ಭದಲ್ಲಿ ಆದಾಯವನ್ನು ತಮಗೆ ಗೊತ್ತಿಲ್ಲದೇ ನೀಡಿರುತ್ತಾರೆ. ಈಗ ಅದನ್ನೇ ಇಟ್ಟುಕೊಂಡು ಯೋಜನೆಗಳನ್ನು ಸ್ಥಗಿತಗೊಳಿಸುವುದರ ಜೊತೆಗೆ ಬಿಪಿಎಲ್ ಕಾರ್ಡ್‌ಗಳನ್ನು ಕೂಡ ನಿಲ್ಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಇದರಿಂದ ಬಡವರಿಗೆ ಔಷಧ ಖರೀದಿಸಲು ಕೂಡ ಕಷ್ಟವಾಗುತ್ತದೆ. ಅಲ್ಲದೇ ಪಡಿತರ ವ್ಯವಸ್ಥೆ ನಿಂತಿರುವುದರಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿದೆ ಎಂದರು.

ಆದಾಯ ಮಿತಿಯನ್ನು 33 ಸಾವಿರ ರು.ನಿಂದ 3 ಲಕ್ಷ ರು.ಗೆ ಏರಿಸಬೇಕಾದ ಅವಶ್ಯಕತೆ ಇದ್ದು, ಸರ್ಕಾರ ಕೂಡಲೇ ಇದನ್ನು ಪರಿಗಣಿಸಬೇಕಾಗಿದೆ. ಮತ್ತು ಈಗ ನಿಂತಿರುವ ಎಲ್ಲಾ ರೀತಿಯ ಪಿಂಚಣಿಯನ್ನು ಪುನಃ ನೀಡಬೇಕು. ಸರ್ಕಾರ ಈ ಕೂಡಲೇ ಮರುಪರಿಶೀಲನೆ ಮಾಡಬೇಕು. ಮಾನವೀಯತೆಯನ್ನು ಮರೆತ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯಬಾರದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕಾಗಿ ಗಿಡಗಳನ್ನು ಬೆಳೆಸಿ: ಮಹೇಶ್ ಕುಮಾರ್
ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಉಂಟಾಗಬೇಕು