ದೇವನಹಳ್ಳಿ: ಚಿಕ್ಕಬಳ್ಳಾಪುರ ಜಿಲ್ಲಾ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಮಾನವ ಹಕ್ಕುಗಳ ಕಮಿಟಿ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಸಾಮಾಜಕ ಕಾರ್ಯಕರ್ತರ ವೇದಿಕೆ, ಹಲವು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಎಲ್ಲಾ ತಾಲೂಕುಗಳಿಂದ ಪಟ್ಟಣದ ರಾಣಿ ವೃತ್ತದಲ್ಲಿ ಜಮಾವಣೆಗೊಂಡು ಹೊರಡಲು ಅಣಿಯಾದ ರೈತರನ್ನು ಬೆಂಗಳೂರಿನೆಡೆಗೆ ತೆರಳದಂತೆ ತಡೆದು ಚಿಕ್ಕಬಳ್ಳಾಪುರ ಕಡೆಗೆ ಡಿಸಿಪಿ ಮಿಥುನ್ ಕುಮಾರ್ ಮತ್ತು ಸಿಬ್ಬಂದಿ ಕಳುಹಿಸಿಕೊಟ್ಟು ಬೈಕ್ ರ್‍ಯಾಲಿ ತಡೆದರು.
ಕೆಲದಿನಗಳ ಹಿಂದೆ ಜಿಲ್ಲಾ ಮಂತ್ರಿಗಳ ಗಮನ ಸೆಳೆಯಲು ಹೋರಾಟದ ವೇದಿಕೆಗೆ ಬಂದು ಆತಂಕ ದೂರಮಾಡಲು ಒತ್ತಾಯಿಸಿದಾಗ ರಾಜ್ಯ ಸರ್ಕಾರ ರೈತರ ಮೇಲೆ ಬಲ ಪ್ರಯೋಗಿಸಿದ್ದು ಸರಿ ಅಲ್ಲ. ಕೇವಲ ೧೩ ಹಳ್ಳಿಗಳ ಸಮಸ್ಯೆಯಾಗದೆ ರಾಜ್ಯದ ಸಾವಿರಾರು ಹಳ್ಳಿಗಳ ಕಷ್ಟ ಕೂಡ ಇದಾಗಿದೆ. ಈ ಕಾರಣಕ್ಕೆ ಸರ್ಕಾರ ಕೂಡಲೇ ಈ ಬಲವಂತದ ಭೂಸ್ವಾಧೀನ ಕೈಬಿಟ್ಟು ೨೦೧೩ ಭೂಸ್ವಾಧೀನ ಕಾಯ್ದೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಈ ತಿದ್ದುಪಡಿ ಕೈಬಿಟ್ಟು ರೈತರನ್ನು ಭಯಮುಕ್ತರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಚೇರಿಯಿಂದ ೧೦,೦೦೦ ಬೈಕ್ ರ್‍ಯಾಲಿಯೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಇಲ್ಲಿಂದ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ನಮ್ಮನ್ನು ರಾಣಿ ವೃತ್ತದಿಂದ ಮುಂದೆ ಸಾಗದಂತೆ ತಡೆದಿದ್ದಾರೆ. ನಾವು ವಾಪಾಸ್ ಚಿಕ್ಕಬಳ್ಳಾಪುರ ರೈತರ ಜೊತೆಗೂಡಿ ನಮ್ಮ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತೀರ್ಮಾನದಂತೆ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ರೈತರ ಭೂಮಿಯನ್ನು ಕೈಗಾರಿಕೆಗಳ ಹೆಸರಲ್ಲಿ ಕಾರ್ಪೂರೇಟ್ ಕಂಪನಿಗಳ ಪಾಲು ಮಾಡಲು ಈ ಜೆಸಿಬಿ ಸರ್ಕಾರ ನಡೆಸಿದ ಮೂರೂ ಪಕ್ಷಗಳು ಸಹ ಒಂದೆ. ಹಾಗಾಗಿ ನಾವು ಇಂತಹ ಸರ್ಕಾರಗಳನ್ನು ದೂರವಿಡಲು ಸಂಘಟಿತರಾಗೋಣ ಇವರು ಪೊಲೀಸರ ಮೂಲಕ ರೈತ ಚಳವಳಿ ಹತ್ತಿಕ್ಕುವ ಯತ್ನಕ್ಕೆ ನಾವು ಹೆದರುವುದಿಲ್ಲ ಎಂದು ಸವಾಲು ಹಾಕಿದರು.
ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ವೆಂಕಟನಾರಾಯಣಪ್ಪ, ಕೆಂಚೇಗೌಡ, ತಾಲೂಕು ಅಧ್ಯಕ್ಷ ಗಾರೆ ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಬಿದಲೂರು ರಮೇಶ್, ರೈತ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್, ವಕೀಲ ಸಿದ್ದಾರ್ಥ, ಶಶಿಧರ್ , ರವಿಕುಮಾರ್, ನಾರಾಯಣಸ್ವಾಮಿ ಮುಂತಾದವರಿದ್ದರು.
೦೬ ದೇವನಹಳ್ಳಿ ಚಿತ್ರಸುದ್ದಿ: ೦೧