-ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷಿತ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಬೇಜವಾಬ್ದಾರಿ ನಿರ್ವಹಣೆಯಿಂದ ಅಪಘಾತಗಳು ಸಂಭವಿಸಿದರೆ, ರಸ್ತೆ ನಿರ್ವಹಣೆಯ ಹೊಣೆ ಹೊತ್ತ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷಿತ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಮಿತಿ ನೀಡಿದ ಸೂಚನೆಗಳನ್ನು ಅಧಿಕಾರಿಗಳು ತಪ್ಪದೇ ಪಾಲಿಸಬೇಕು. ಜಿಲ್ಲೆಯಲ್ಲಿ ಉಂಟಾಗುತ್ತಿರುವ ಅಪಘಾತಗಳ ಪ್ರಮಾಣ ಇಳಿಕೆಯಾಗಬೇಕು. ರಸ್ತೆ ಸುರಕ್ಷತಾ ನಿಧಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಮಾರ್ಕಿಂಗ್, ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಜರುಗಿದ ಸಭೆಯ ಅನುಪಾಲನಾ ವರದಿ ಸಲ್ಲಿಸದ ಅಧಿಕಾರಿಗಳಿಗೆ ಸಮಿತಿ ವತಿಯಿಂದ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶಿಸಿದರು.
ನಗರಸಭೆಯಿಂದ ಆಟೋ ನಿಲ್ದಾಣಗಳಿಗಾಗಿ 27 ಹಾಗೂ ಬೀದಿ ಬದಿ ವ್ಯಾಪಾರಿಗಳಿಗಾಗಿ 12 ಸ್ಥಳಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರ ಬೇಡಿಕೆ ಆಧ ರಿಸಿ ಡಿವೈಡರ್ ತೆರವು ಗೊಳಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಸಭೆಯಲ್ಲಿ ತಿಳಿಸದರು.
ನಗರದ ಬಿಡಿ ರಸ್ತೆಯ ಮೂಲಕ ಬೆಂಗಳೂರು, ಶಿವಮೊಗ್ಗ ಹಾಗೂ ಚಳ್ಳಕೆರೆ ಮಾರ್ಗಗಳಿಗೆ ಸಂಚರಿಸುವ ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್‍ಗಳ ಸಂಚಾರ ಮಾರ್ಗ ಬದಲಾವಣೆಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. 1200ಕ್ಕೂ ಹೆಚ್ಚು ಬಸ್‍ಗಳು ಈ ಮಾರ್ಗಗಳ ಮೂಲಕವೇ ಸಂಚಾರ ನಡೆಸುತ್ತವೆ. ಗಾಂಧಿ ಹಾಗೂ ಎಸ್ಬಿಐ ವೃತ್ತದಲ್ಲಿ ಹೆಚ್ಚಿನ ಸಂಚಾರಿ ದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಹಳೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಬಳಿಸಿ ಬಸ್‍ಗಳು ಕಾರ್ಯಾಚರಣೆ ನಡೆಸುವಂತೆ ಆದೇಶ ಹೊರಡಿಸಲಾಗುವುದು. ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಹಾಗೂ ಜಾಥಾ ನಡೆಸಲು ಅನುಮತಿ ನೀಡದಿರಲು ತೀರ್ಮಾನಿಸಲಾಯಿತು.
ಸಂಚಾರಿ ಪೊಲೀಸ್ ಇನ್ಸಪೆಕ್ಟರ್ ರಾಜು ಅವರು ನಗರ ಸಂಚಾರಿ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮೋನಪ್ಪ, ಡಿವೈಎಸ್ಪಿಗಳಾದ ದಿನಕರ್, ರಾಜಣ್ಣ, ಶಿವಕುಮಾರ್ ಸೇರಿದಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪೋಟೋ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.
ಫೋಟೋ: