ದನದ ಕೊಟ್ಟಿಗೆಗೆ ಬೆಂಕಿ: 12 ಎಮ್ಮೆಗಳು ಸಜೀವ ದಹನ

KannadaprabhaNewsNetwork |  
Published : Mar 21, 2026, 01:45 AM IST
ಹಾವೇರಿ ತಾಲೂಕಿನ ಕನವಳ್ಳಿಯಲ್ಲಿ ದನದ ಕೊಟ್ಟಿಗೆ ಬೆಂಕಿಬಿದ್ದ ಪರಿಣಾಮ 12ಕ್ಕೂ ಹೆಚ್ಚು ಎಮ್ಮೆಗಳು ಸಜೀವ ದಹನಗೊಂಡಿರುವುದು. | Kannada Prabha

ಸಾರಾಂಶ

ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ ಹಾರಿ ದನದ ಕೊಟ್ಟಿಗೆ ಮೇಲೆ ಬೆಂಕಿಬಿದ್ದ ಪರಿಣಾಮ 12ಕ್ಕೂ ಹೆಚ್ಚು ಎಮ್ಮೆಗಳು ಸಜೀವ ದಹನಗೊಂಡ ಮನಕಲುಕುವ ಘಟನೆ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ್ದು, ಇಡೀ ಗ್ರಾಮವೇ ಮಮ್ಮಲ ಮರುಗುವಂತೆ ಮಾಡಿದೆ.

ಹಾವೇರಿ:ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ ಹಾರಿ ದನದ ಕೊಟ್ಟಿಗೆ ಮೇಲೆ ಬೆಂಕಿಬಿದ್ದ ಪರಿಣಾಮ 12ಕ್ಕೂ ಹೆಚ್ಚು ಎಮ್ಮೆಗಳು ಸಜೀವ ದಹನಗೊಂಡ ಮನಕಲುಕುವ ಘಟನೆ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ್ದು, ಇಡೀ ಗ್ರಾಮವೇ ಮಮ್ಮಲ ಮರುಗುವಂತೆ ಮಾಡಿದೆ.ತಾಲೂಕಿನ ಕನವಳ್ಳಿ ಗ್ರಾಮದ ಪರಮೇಶಪ್ಪ ಸೋಮಪ್ಪ ಜಾಡರ ಎಂಬುವವರಿಗೆ ಸೇರಿದ ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ. ಗ್ರಾಮದ ಮೆಹಬೂಬ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಎದುರಿಗೆ ಈ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಗಧಗಿಸಿದ ಬೆಂಕಿ..ಗುರುವಾರ ಸಂಜೆ ಮೋಡ ಕವಿದ ವಾತಾವರಣ, ಗುಡುಗು ಮಿಂಚಿನ ಆರ್ಭಟ ಜೋರಾಗಿದ್ದರೂ, ಎಂದಿನಂತೆ ಹಾಲು ಕರೆದುಕೊಂಡು ಪರಮೇಶಪ್ಪ ಮನೆಗೆ ಬಂದಿದ್ದಾನೆ. ನಂತರ ಜೋರಾಗಿ ಬೀಸಿದ ಮಳೆ ಗಾಳಿಗೆ ದನದ ಕೊಟ್ಟಿಗೆ ಬಳಿ ಇದ್ದ ವಿದ್ಯುತ್ ಲೈನ್‌ಗಳು ಒಂದಕ್ಕೊಂದು ತಾಗಿ, ಬೆಂಕಿಯ ಕಿಡಿ ಹೊತ್ತಿಕೊಂಡು ದನದ ಕೊಟ್ಟಿಗೆ ಮೇಲೆ ಬಿದ್ದಿದೆ. ಅಲ್ಲಿಯೇ ಇದ್ದ ಮೆಕ್ಕೆಜೋಳದ ಹೊಟ್ಟಿಗೂ ಬೆಂಕಿ ಕಿಡಿ ಹೊತ್ತಿಕೊಂಡ ಪರಿಣಾಮ ದನದ ಕೊಟ್ಟಿಗೆ ಸುತ್ತ ವ್ಯಾಪಿಸಿದೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ, ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಅದಾಗಲೇ ಕೊಟ್ಟಿಗೆಯಲ್ಲಿದ್ದ ಎಮ್ಮೆಗಳು ಸಜೀವ ದಹನಗೊಂಡಿದ್ದವು. ಹಬ್ಬದ ಖುಷಿಯನ್ನೇ ಕಸಿದುಕೊಂಡ ಘಟನೆ.. ಪರಮೇಶಪ್ಪ ಜಾಡರ ಎಮ್ಮೆ ಸಾಕಾಣಿಕೆಯನ್ನೇ ತನ್ನ ಮೂಲ ವೃತ್ತಿಯನ್ನಾಗಿಸಿಕೊಂಡಿದ್ದು, ತನ್ನ ಮಕ್ಕಳಿಗಿಂತ ಹೆಚ್ಚು ಜೋಪಾನ ಮಾಡುತ್ತಿದ್ದ. ಈ ಘಟನೆ ಅವರ ಕುಟುಂಬಕ್ಕೆ ಸಿಡಿಲಾಘಾತದಂತೆ ಅಪ್ಪಳಿಸಿದ್ದು, ಇಡೀ ಕುಟುಂಬವೇ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.ಸ್ಥಳಕ್ಕೆ ಅಧಿಕಾರಿಗಳು ಭೇಟಿ: ಇನ್ನೂ ವಿಷಯ ತಿಳಿದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪರಮೇಶಪ್ಪ ಹುಬ್ಬಳ್ಳಿ, ಬೆಳವಿಗಿ ಪಶುಆಸ್ಪತ್ರೆ ಮುಖ್ಯಾಧಿಕಾರಿ ಡಾ. ವಿಜಯಕುಮಾರ ಹಳಕಟ್ಟಿ, ಕರ್ಜಗಿ ಅಧಿಕಾರಿ ಬಸವರಾಜ ದೊಡ್ಡಮನಿ, ಕನವಳ್ಳಿ ಪಶುಆಸ್ಪತ್ರೆ ಪರೀಕ್ಷಕ ಭರಮಪ್ಪ ಕಟ್ಟಿಗೇರ, ಗ್ರಾಮಾಡಳಿತ ಅಧಿಕಾರಿ ಬಸನಗೌಡ ಗೌಡರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ, ಕೆಸಿಸಿ ಬ್ಯಾಂಕಿನ ನಿರ್ದೇಶಕ ಕೋಟ್ರೇಶಪ್ಪ ಬಸೇಗಣ್ಣಿ ಸೇರಿದಂತೆ ಗಣ್ಯರು ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಸಕ ರುದ್ರಪ್ಪ ಲಮಾಣಿ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು.ಸಾವಿನ ದವಡೆಯಿಂದ ಪಾರಾದ ಕರು:ದನದ ಕೊಟ್ಟಿಯಲ್ಲಿದ್ದ 14 ಎಮ್ಮೆಗಳು ಬೆಂಕಿಗಾಹುತಿಯಾಗಿದ್ದರೂ ಎಮ್ಮೆಯೊಂದರ ಕರು ಸಾವಿನ ದವಡೆಯಿಂದ ಪಾರಾಗಿದೆ. ಮಾಲೀಕ ಪರಮೇಶಪ್ಪ ಹಾಲು ಕರೆದುಕೊಂಡು ಮನೆಗೆ ಹೋದಾಗ, ಕರು ಸ್ವಲ್ಪ ಹಾಲು ಕುಡಿದು ರಾತ್ರಿ ವೇಳೆ ಕೊಟ್ಟಿಗೆಯಿಂದ ಹೊರಬಂದಿದೆ. ಆಗ ಬೆಂಕಿ ಹೊತ್ತಿಕೊಂಡಿದ್ದರಿಂದ ಎಲ್ಲ ಎಮ್ಮೆಗಳು ಬೆಂಕಿಗಾಹುತಿಯಾದರೂ, ಕರು ಮಾತ್ರ ತನ್ನ ತಾಯಿಯನ್ನು ಕಳೆದುಕೊಂಡು ಮೂಕವಿಸ್ಮಯದಂತೆ ನೋಡುತ್ತಾ ನಿಂತಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.ಲಕ್ಷಾಂತರ ರು. ಹಾನಿ: ತಲಾ ಒಂದು ಎಮ್ಮೆಗೆ ಕನಿಷ್ಠ 50 ಸಾವಿರದಿಂದ ಗರಿಷ್ಠ 70 ಸಾವಿರ ರು. ಬೆಲೆ ಬಾಳುವ ಎಮ್ಮೆಗಳನ್ನು ಸಾಕಿಕೊಂಡಿದ್ದು, ಆದರೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದರಿಂದ 12 ಎಮ್ಮೆಗಳು ಸಾವನ್ನಪ್ಪಿವೆ. ಇನ್ನೂ ಎರಡು ಎಮ್ಮೆಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿವೆ. ಜತೆಗೆ ನಾಲ್ಕೈದು ಟ್ರ್ಯಾಕ್ಟರ್‌ನಷ್ಟು ಮೆಕ್ಕೆಜೋಳ ರೌದಿ ಸುಟ್ಟು ಹೋಗಿದೆ. ಸುಮಾರು 8ರಿಂದ 10 ಲಕ್ಷ ರು. ನಷ್ಟ ಸಂಭವಿಸಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪರಿಹಾರಕ್ಕೆ ಸಂಸದ ಬೊಮ್ಮಾಯಿ ಆಗ್ರಹ: ತಾಲೂಕಿನ ಕನವಳ್ಳಿ ಗ್ರಾಮದ ಪರಮೇಶಪ್ಪ ಸೋಮಪ್ಪ ಜಾಡರ್ ಅವರಿಗೆ ಸೇರಿದ ದನದಕೊಟ್ಟಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 12ಕ್ಕೂ ಹೆಚ್ಚು ಎಮ್ಮೆಗಳು ಸಜೀವ ದಹನವಾಗಿರುವ ಸುದ್ದಿ ಕೇಳಿ ಅತ್ಯಂತ ನೋವಾಯಿತು. ಲಕ್ಷಾಂತರ ರು. ಬೆಲೆ ಬಾಳುವ ಮೂಕ ಪ್ರಾಣಿಗಳು ಅನ್ಯಾಯವಾಗಿ ಜೀವ ಕಳೆದುಕೊಂಡಿದ್ದು, ಇದರಿಂದ ರೈತನಿಗೆ ಅಪಾರ ಹಾನಿಯಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿರುವ ರೈತನಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಎಕ್ಸ್ ಮೂಲಕ ಆಗ್ರಹಿಸಿದ್ದಾರೆ.ಕನವಳ್ಳಿಯ ಪರಮೇಶಪ್ಪ ಜಾಡರ್‌ಗೆ ಸೇರಿದ 12ಕ್ಕೂ ಹೆಚ್ಚು ಎಮ್ಮೆಗಳು ಬೆಂಕಿಗೆ ಬಲಿಯಾಗಿರುವುದು ಬಹಳ ನೋವನ್ನುಂಟು ಮಾಡಿದೆ. ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಂಕೇಶ ಸಾಹಿತ್ಯ ಸಾಧನೆ ಅನುಕರಣೀಯ-ಡಾ. ಮಾನ್ಪಡೆ
ಮಹಿಳೆಯರು ಸಬಲರಾದರೆ ಮಹಿಳಾ ದಿನಾಚರಣೆ ಸಾರ್ಥಕ