ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮದ ಕಬ್ಬಿನಗದ್ದೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಿಗಳನ್ನು ವಶಕ್ಕೆ ಪಡೆದಿದ್ದರು.
ಆದರೆ, ತಾಯಿ ಚಿರತೆ ಪತ್ತೆಯಾಗದ ಕಾರಣ ಗ್ರಾಮಸ್ಥರು, ರೈತರು ಆತಂಕಕ್ಕೆ ಒಳಗಾಗಿದ್ದರು. ಚಿರತೆ ಓಡಾಡುವ ಸ್ಥಳದಲ್ಲಿ ಬೋನು ಇಟ್ಟು ಅದನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಹೆಜ್ಜೆ ಗುರುತುಗಳನ್ನು ಕಂಡು ಹಿಡಿದು ಚಿರತೆ ಓಡಾಡುತ್ತಿದ್ದ ಸ್ಥಳದಲ್ಲಿ ಬೋನ್ ಇಟ್ಟಿದ್ದರು.ಶುಕ್ರವಾರ ಬೋನಿನೊಳಗೆ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ಚಿರತೆ ಬೋನಿನಲ್ಲಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬೋನಿನಲ್ಲಿ ಸೆರೆಯಾಗಿದ್ದ ಚಿರತೆಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆ ವಾಹನದಲ್ಲಿ ಕೊಂಡೊಯ್ದು ಕಳೆದ ಎರಡು ದಿನಗಳ ಹಿಂದೆಯಷ್ಟೆ ಪತ್ತೆಯಾಗಿದ್ದ ಚಿರತೆ ಮರಿಗಳನ್ನು ತಾಯಿ ಚಿರತೆಯೊಂದಿಗೆ ಸೇರಿಸಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾದರು.
ಭೂತನಹೊಸೂರು ಗ್ರಾಮದ ಸಮೀಪ ಗುರುವಾರ ರೈತರ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಸಿಕ್ಕಿದ್ದವು. ತಾಯಿ ಚಿರತೆ ಮರಿ ಹುಡುಕಿಕೊಂಡು ಬರುವ ಸೂಚನೆ ಅರಿತು ಸ್ಥಳದಲ್ಲಿ ಬೋನ್ ಇಟ್ಟಲಾಗಿತ್ತು. ಮರಿಗಳನ್ನು ಹುಡುಕಲು ಬಂದು ತಾಯಿ ಚಿರತೆ ಬೋನಿಗೆ ಬಿದ್ದು ಚಿರತೆ ಮರಿ ಮತ್ತು ತಾಯಿ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದು ಸುತ್ತಮುತ್ತಲಿನ ನೂರಾರು ಜನರು ಚಿರತೆ ನೋಡಲು ಮುಗಿಬಿದ್ದ ಘಟನೆಯೂ ನಡೆಯಿತು. ಮುಂಜಾಗೃತ ಕ್ರಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಜನರು ಚಿರತೆ ಇರುವ ಬೋನಿನ ಬಳಿ ತೆರಳದಂತೆ ಎಚ್ಚರಿಕೆ ವಹಿಸಿದ್ದರು.