ಕನ್ನಡಪ್ರಭ ವಾರ್ತೆ ಬೆಂಗಳೂರು ‘ಬಸವ ಸಮಿತಿ ಯುರೋಪ್’ ವತಿಯಿಂದ ಪ್ರಥಮ ಬಾರಿಗೆ ಜರ್ಮನಿಯ ಎರ್ಲಾಂಗ್‌ನಲ್ಲಿ ಸಮಾಜ ಸುಧಾರಕ ಬಸವಣ್ಣನವರ ಜಯಂತಿಯನ್ನು ಮೇ.31ರಂದು ಆಯೋಜಿಸಲಾಗಿದೆ ಎಂದು ಬೆಂಗಳೂರಿನ ನೆಲಮಂಗಲದ ವಾಸಿ ರಾಕೇಶ್ ಉಮಾಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುರೋಪ್‌ನ ಹಲವು ದೇಶಗಳಲ್ಲಿ ವಾಸಿಸುವ ಬಸವ ಭಕ್ತರು ಕಳೆದ ಎರಡು ವರ್ಷಗಳ ನಿರಂತರ ಪ್ರಯತ್ನದಿಂದ ‘ಬಸವ ಸಮಿತಿ ಯುರೋಪ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಅಖಿಲ ಭಾರತದ ವೀರಶೈವ ಮಹಾಸಭದ ಅಧ್ಯಕ್ಷರಾದ ಶ್ರೀ ಶಂಕರ ಮಹಾದೇವ ಬಿದರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಹಾಗೂ ಶರಣ ಸಾಹಿತ್ಯ ಚಿಂತಕಿ ಮತ್ತು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಉಮಾಶಂಕರ್ ಅವರು ಮಾಹಿತಿ ನೀಡಿದ್ದಾರೆ.
ಮ್ಯುನಿಕ್ ಭಾರತೀಯ ರಾಯಭಾರಿ ಕಚೇರಿ, ಆಸ್ಲ್ಯಾಂಡರ್ ಇಂಟಿಗ್ರೇಷನ್ ಬೈರುತ್ ಎರ್ಲಾಂಗನ್, ಐಸಿಎಫ್ ತಂಡ, ನಟ್ರಾಸ್ ನಾಟ್ಯ ತಂಡ, ಓಂ ದೋಲ್ ತಾಶಾ, ಮಾತಂಗಿ ನೃತ್ಯ ತಂಡ, ಚಾಮುಂಡಿ ಸ್ಕೂಲ್ ಆಫ್ ಮ್ಯೂಸಿಕ್, ಭಾವತರಂಗ ನೃತ್ಯ ತಂಡಗಳು ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸುತ್ತಿವೆ. ಇನ್ನು ಕಾರ್ಯಕ್ರಮದಲ್ಲಿ ಬಸವ ಮೆರವಣಿಗೆ, ಮಕ್ಕಳಿಂದ ವಚನ ಪಠಣ, ಅಥಿತಿಗಳಿಗೆ ಸನ್ಮಾನ, ಪುಸ್ತಕ ಬಿಡುಗಡೆ, ದಾಸೋಹ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.