ಜನೌಷಧಿ ಕೇಂದ್ರ ಸ್ಥಗಿತ: ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಂಡನೆ

KannadaprabhaNewsNetwork |  
Published : May 31, 2025, 12:20 AM IST
ಸಂಡೂರಿನ ಜನೌಷಧಿ ಕೇಂದ್ರದ ಮುಂದೆ ಶುಕ್ರವಾರ ಬಿಜೆಪಿ ಮುಖಂಡರು ಧರಣಿ ನಡೆಸಿದರು. | Kannada Prabha

ಸಾರಾಂಶ

ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ, ಬಿಜೆಪಿ ಸಂಡೂರು ಮಂಡಲದ ಮುಖಂಡರು ಹಾಗೂ ಕಾರ್ಯಕರ್ತರು ಕೈಗಳಿಗೆ ಕಪ್ಪುಪಟ್ಟಿ ಧರಿಸಿ, ಶುಕ್ರವಾರ ಸಂಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧಿ ಕೇಂದ್ರದ ಧರಣಿ ನಡೆಸಿದರು.

ಸಂಡೂರು: ಜನೋಪಯೋಗಿಯಾಗಿದ್ದ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ, ಬಿಜೆಪಿ ಸಂಡೂರು ಮಂಡಲದ ಮುಖಂಡರು ಹಾಗೂ ಕಾರ್ಯಕರ್ತರು ಕೈಗಳಿಗೆ ಕಪ್ಪುಪಟ್ಟಿ ಧರಿಸಿ, ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧಿ ಕೇಂದ್ರದ ಮುಂದೆ ಕೆಲಸಮಯ ಧರಣಿ ನಡೆಸಿದರು.

ಮೋದಿ ಸರ್ಕಾರದ ಯೋಜನೆಗಳ ವಿರುದ್ಧ ದ್ವೇಷ ಸಾಧಿಸುತ್ತಿರುವ, ಖಾಸಗಿ ಮೆಡಿಕಲ್ ಮಾಫಿಯಾಕ್ಕೆ ಮಣಿದು ಬಡವರ ಪರವಾಗಿದ್ದ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಮುಖಂಡರು ತೀವ್ರ ಖಂಡನೆ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಮಾತನಾಡಿ, ಜನೌಷಧಿ ಕೇಂದ್ರಗಳಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಪ್ರತಿದಿನ ೧೨ರಿಂದ ೧೫ ಲಕ್ಷ ಜನ ಜನೌಷಧಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ೭೦೦ ಜನೌಷಧಿ ಕೇಂದ್ರಗಳಿವೆ. ಸಂಡೂರಿನಲ್ಲಿರುವ ಜನೌಷಧಿ ಕೇಂದ್ರಕ್ಕೆ ಪ್ರತಿದಿನ ೨೦೦-೨೫೦ ಗ್ರಾಹಕರು ಬಂದು ಔಷಧಿ ಖರೀದಿಸುತ್ತಿದ್ದಾರೆ. ಜನೌಷಧಿ ಕೇಂದ್ರದಲ್ಲಿ ₹೧೨ಕ್ಕೆ ಸಿಗುವ ಕೆಮ್ಮಿನ ಟಾನಿಕ್, ಹೊರಗಡೆ ತೆಗೆದುಕೊಂಡರೆ ₹೧೨೦ ಆಗುತ್ತದೆ. ಇದೇ ತರಹ ಜನೌಷಧಿ ಕೇಂದ್ರಗಳಲ್ಲಿನ ದರಗಳಿಗೂ, ಹೊರಗಡೆ ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿನ ದರಗಳಿಗೂ ಬಹಳ ವ್ಯತ್ಯಾಸವಿದೆ ಎಂದು ದೂರಿದರು.

ಜಿಲ್ಲಾಸ್ಪತ್ರೆಯಲ್ಲಿಯೇ ಕಳಪೆ ಗುಣಮಟ್ಟದ ಔಷಧಿ ಬಳಸಿದ್ದರಿಂದ ಕೆಲವು ಬಾಣಂತಿಯರು ಮೃತಪಟ್ಟರು. ಜನೌಷಧಿ ಕೇಂದ್ರಗಳಿಂದ ತೆಗೆದುಕೊಂಡ ಔಷಧಿಗಳಿಂದ ಮೃತಪಟ್ಟ ಉದಾಹರಣೆಗಳಿವೆಯಾ? ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಔಷಧಿಗಳನ್ನು ಉಚಿತವಾಗಿ ಕೊಟ್ಟರೆ, ಜನತೆ ಯಾಕೆ ಜನೌಷಧಿ ಕೇಂದ್ರಗಳಿಗೆ ಹೋಗುತ್ತಾರೆ? ಮೊದಲು ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಮೂಲ ಸೌಕರ್ಯಗಳನ್ನು ಸರಿಪಡಿಸಲಿ. ಅಗತ್ಯ ಔಷಧಿಗಳನ್ನು ಪೂರೈಸಲಿ. ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ತೀರ್ಮಾನವನ್ನು ಗಮನಿಸಿದರೆ, ಸರ್ಕಾರ ಖಾಸಗಿ ಔಷಧಿ ಕಂಪನಿಗಳ ಮಾಫಿಯಾಕ್ಕೆ ಮಣಿದಿದೆ ಎನಿಸುತ್ತಿದೆ ಎಂದರು.

ಜನೌಷಧಿ ಕೇಂದ್ರದಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಜನೌಷಧಿ ಕೇಂದ್ರಗಳನ್ನು ಮುಚ್ಚಿದರೆ, ಜನಪರವಾದ ಯೋಜನೆಗಳನ್ನು ವಿರೋಧಿಸಿದರೆ, ಜನತೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮುಖಂಡರಾದ ಕೆ. ಯರಿಸ್ವಾಮಿ, ಚಿರಂಜೀವಿ, ವಿಶ್ವನಾಥರೆಡ್ಡಿ, ವಿ.ಎಸ್. ಶಂಕರ್ ಮಾತನಾಡಿ, ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

ಪಕ್ಷದ ಮುಖಂಡರಾದ ಕೆ. ರಮೇಶ್, ನರಸಿಂಹ, ವಸಂತಕುಮಾರ್, ಆರ್.ಟಿ. ರಘು, ದರೋಜಿ ರಮೇಶ್, ಪ್ರತಾಪ್ ಮೇಟಿ, ಕಿನ್ನೂರೇಶ್ವರ, ಅಬ್ದುಲ್ ವಹಾಬ್, ಅಂಜಿನಿ, ಪರಶುರಾಮ, ಸತ್ಯನಾರಾಯಣ, ಡಿ. ನಾಗರಾಜ, ತಾಯಪ್ಪ, ರವಿಕಾಂತ್ ಭೋಸ್ಲೆ, ವಿಜಯಕುಮಾರ್, ಧರ್ಮಾನಾಯ್ಕ್ ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!