ದಾವಣಗೆರೆ: ಖ್ಯಾತ ನಟ ಕಮಲ್ ಹಾಸನ್ ಸೇರಿದಂತೆ ಅನೇಕರು ಇನ್ನೂ ಅಪ್‌ಡೇಟ್ ಆಗಿಲ್ಲ. ತಮ್ಮ ಮಾತು ಯಾವಾಗ ಸತ್ಯವಲ್ಲವೆಂದು ಗೊತ್ತಾಗುತ್ತದೋ ತಕ್ಷಣ ಕ್ಷಮೆ ಕೇಳಬೇಕು. ಅದನ್ನು ಬಿಟ್ಟು ನಾನು ಕ್ಷಮೆ ಕೇಳಲ್ಲವೆಂದು ವಾದ ಮಾಡಬಾರದು ಎಂದು ನಟ ಅಹಿಂಸಾ ಚೇತನ್ ಹೇಳಿದರು.
ಪಂಚ ದ್ರಾವಿಡ ಭಾಷೆಗಳೆಲ್ಲವೂ ಸೋದರ, ಸಹೋದರಿ ಭಾಷೆಗಳಾಗಿವೆ. ಸಂಸದ ಯದುವೀರ್ ಅವರ ಹೇಳಿಕೆ ಸಹ ಕಮಲ ಹಾಸನ್ ರೀತಿಯೇ ಇದೆ. ಯದುವೀರ ಸಹ ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಮಾತನಾಡುತ್ತಿದ್ದಾರೆ. ಸತ್ಯವನ್ನು ಅರಿತು, ಕಮಲ್ ಹಾಸನ್ ಕ್ಷಮೆ ಕೇಳಬೇಕು. ಕ್ಷಮೆ ಕೇಳುವುದಿಲ್ಲವೆಂದು ಉದ್ಧಟತನ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಶಿವಣ್ಣ ಮೌನ ಸಲ್ಲ:ಇದು ತಮಿಳು-ಕನ್ನಡ ಭಾಷೆಗಳ ನಡುವಿನ ಘರ್ಷಣೆಯಲ್ಲ. ಇದು ಸತ್ಯ ಹಾಗೂ ಸುಳ್ಳಿನ ನಡುವಿನ ಸಂಘರ್ಷವಾಗಿದೆ. ಹಿರಿಯ ನಟ ಡಾ.ರಾಜಕುಮಾರ ಕನ್ನಡ ನಾಡು, ಭಾಷೆಗಾಗಿ ಗೋಕಾಕ ಚಳವಳಿಯಲ್ಲಿ ಭಾಗವಹಿಸಿ, ಹೋರಾಟ ನಡೆಸಿದರು. ಪುತ್ರ, ನಟ ಶಿವರಾಜಕುಮಾರ್ ಸಹ ಅದೇ ರೀತಿ ಹೋರಾಟವನ್ನು ಮುಂದುವರಿಸಬೇಕಿತ್ತು. ಆದರೆ, ಸ್ನೇಹ, ಸಿನಿಮಾ ಅಂತೆಲ್ಲಾ ಹೇಳಿಕೊಂಡು ಶಿವರಾಜಕುಮಾರ್ ಸಹ ಸುಮ್ಮನಾಗಿರುವುದು ಸರಿಯಲ್ಲ ಎಂದರು.
ಗೃಹ ಇಲಾಖೆ ಸಂಪೂರ್ಣ ವಿಫಲ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇರುವುದರಿಂದಲೇ ಸಂವಿಧಾನ ಗಟ್ಟಿಯಾಗಿದೆ. ವಾಕ್ ಸ್ವಾತಂತ್ರ್ಯ ಇದೆಯೆಂಬ ಕಾರಣಕ್ಕೆ ಒಂದು ಸಮುದಾಯವನ್ನು ಹೀನಾಯ ಮಾಡುವುದು ಸರಿಯಲ್ಲ. ಮಂಗಳೂರಿನಲ್ಲಿ ಮನೋವಾದ ಹಾಗೂ ಹಿಂದುತ್ವದ ವಿಚಾರವಾಗಿ ಘರ್ಷಣೆಯಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ಕಾನೂನು, ಸುವ್ಯವಸ್ಥೆ ನಿಯಂತ್ರಿಸುವಲ್ಲೂ ವಿಫಲವಾಗಿದೆ ಎಂದು ಚೇತನ್ ದೂರಿದರು.
43 ಕೇಸ್ ರದ್ದುಪಡಿಸಲು ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೇತನ್, ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ ಹಲವಾರು ಪ್ರಭಾವಿಗಳ ಮೇಲೆ ಇದ್ದಂತಹ 43 ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂಪಡೆದ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ನೆಲದ ಕಾನೂನು ವ್ಯವಸ್ಥೆ ಮೇಲೆ ತುಂಬಾ ನಂಬಿಕೆ ಇದೆ. ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳುತ್ತದೆಂಬ ಸಂಪೂರ್ಣ ವಿಶ್ವಾಸ ತಮಗಿದೆ ಎಂದರು.
ಕನ್ನಡಪ್ರಭ ವಾರ್ತೆ ದಾವಣಗೆರೆ ಕನ್ನಡದ ಪರವಾಗಿ ರಾಜ್ಯ ಸರ್ಕಾರ ಒಂದೇ ಒಂದು ಯೋಜನೆ ಸಹ ತಂದಿಲ್ಲ. ಕನ್ನಡಕ್ಕೆ ದ್ರೋಹ ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಎಂದು ನಟ ಅಹಿಂಸಾ ಚೇತನ್ ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ- ಪಂಗಡಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಹಿಂದಿನ ಬಿಜೆಪಿ ಸರ್ಕಾರ, ಇಂದಿನ ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿವೆ. ಎರಡೂ ಸರ್ಕಾರಗಳು ಹಣವನ್ನ ದುರ್ಬಳಕೆ ಮಾಡಿಕೊಂಡಿವೆ. ಅದರಲ್ಲೂ ಬಿಜೆಪಿಗಿಂತಲೂ ಕಾಂಗ್ರೆಸ್ ಸರ್ಕಾರವೇ ಹೆಚ್ಚು ಹಣ ದುರುಪಯೋಗ ಮಾಡಿದೆ. ಕಮಲ್ ಹಾಸನ್ ರೀತಿಯಲ್ಲೇ ಸಿಎಂ ಮೊಂಡುತನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹಿರಿಯ ವಕೀಲರಾದ ಬಿ.ಎಂ. ಹನುಮಂತಪ್ಪ, ನಿವೃತ್ತ ಪೊಲೀಸ್ ಉಪಾಧೀಕ್ಷಕ ರವಿನಾರಾಯಣ ಇತರರು ಇದ್ದರು.
- ಚೇತನ್, ನಟ