ಯೆನೆಪೋಯ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೊ ರೊಬೊಟಿಕ್ ಸರ್ಜರಿ

KannadaprabhaNewsNetwork |  
Published : Sep 11, 2025, 12:04 AM IST
ಯೆನೆಪೋಯದಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೊ ರೊಬೊಟಿಕ್ ಸರ್ಜರಿ ವ್ಯವಸ್ಥೆಯನ್ನು ವಿವರಿಸುತ್ತಿರುವ ಆಸ್ಪತ್ರೆಯ ವೈದ್ಯರು. | Kannada Prabha

ಸಾರಾಂಶ

ಆರ್ಥೋಪೆಡಿಕ್ ರೊಬೊಟಿಕ್ ವ್ಯವಸ್ಥೆ ‘ಸ್ಕೈವಾಕರ್’ ಸರ್ಜರಿಯನ್ನು ಮಂಗಳೂರಿನ ಯೆನೆಪೋಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಿದೆ. ಈ ವ್ಯವಸ್ಥೆಯನ್ನು ಹೊಂದಿದ ದಕ್ಷಿಣ ಏಷ್ಯಾದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಯೆನೆಪೋಯ ಪಾತ್ರವಾಗಿದೆ.

ಮಂಗಳೂರು: ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಎನಿಸಿದ ಆರ್ಥೋಪೆಡಿಕ್ ರೊಬೊಟಿಕ್ ವ್ಯವಸ್ಥೆ ‘ಸ್ಕೈವಾಕರ್’ ಸರ್ಜರಿಯನ್ನು ಮಂಗಳೂರಿನ ಯೆನೆಪೋಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಿದೆ. ಈ ವ್ಯವಸ್ಥೆಯನ್ನು ಹೊಂದಿದ ದಕ್ಷಿಣ ಏಷ್ಯಾದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಯೆನೆಪೋಯ ಪಾತ್ರವಾಗಿದೆ.ಅಮೆರಿಕದ ಮೈಕ್ರೋಪೋರ್ಟ್ ಆರ್ಥೋಪೆಡಿಕ್ಸ್ ಇಂಕ್ ಸಹಭಾಗಿತ್ವದಲ್ಲಿ ಈ ಸರ್ಜರಿ ವ್ಯವಸ್ಥೆಯನ್ನು ಯೆನೆಪೋಯದಲ್ಲಿ ಆರಂಭಿಸಲಾಗಿದೆ. ಇದರೊಂದಿಗೆ ರೋಗಿಗಳ ಆರೈಕೆಗೆ ಜಾಗತಿಕ ದರ್ಜೆಯ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಆಸ್ಪತ್ರೆಯು ಇನ್ನೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್ ಮತ್ತು ಮೈಕ್ರೋಪೋರ್ಟ್ ಆರ್ಥೋಪೆಡಿಕ್ಸ್‌ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಮತ್ತು ಜನರಲ್ ಮ್ಯಾನೇಜರ್ ಡಾ.ಮುಕೇಶ್ ಪಾರ್ಮರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘ಎವೊಲ್ಯೂಷನ್ ಮೀಡಿಯಲ್- ಪೈವೊಟ್ ನೀ ಸಿಸ್ಟಮ್’ ಜತೆಗೆ ಕೆಲಸ ಮಾಡುವಂತೆ ವಿನ್ಯಾಸಗೊಂಡ ಜಗತ್ತಿನ ಏಕೈಕ ರೊಬೊಟಿಕ್ ಸರ್ಜರಿ ತಂತ್ರಜ್ಞಾನವೇ ಸ್ಕೈವಾಕರ್ ಆರ್ಥೋಪೆಡಿಕ್ ರೊಬೊಟಿಕ್ ಸಿಸ್ಟಮ್. ಇವೆರಡೂ ಸೇರಿಕೊಂಡು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿ ಅತ್ಯುತ್ತಮ ನಿಖರತೆಯನ್ನು ನೀಡುತ್ತವೆ. ಈ ತಂತ್ರಜ್ಞಾನವು ರೋಗಿಯ ನಿರ್ದಿಷ್ಟ ದೇಹರಚನೆಯನ್ನು ಆಧರಿಸಿ, ಪ್ರತಿಯೊಬ್ಬರಿಗೂ ಅವರಿಗೆ ಅಗತ್ಯವಿರುವ ರೀತಿಯಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಪೂರೈಸುತ್ತದೆ ಎಂದು ವಿವರಿಸಿದರು.

ಈ ಸೌಲಭ್ಯದಿಂದಾಗಿ ಮಂಡಿ ಬದಲಾವಣೆಯ ಬಳಿಕ ರೋಗಿಗಳು ಬಹಳ ಬೇಗ ಚೇತರಿಸಿಕೊಂಡು, ಸುದೀರ್ಘ ಅವಧಿಯವರೆಗೆ ಯಾವುದೇ ನೋವಿಲ್ಲದೆ ಮೊದಲಿನಂತೆ ಕೆಲಸ ಕಾರ್ಯಗಳನ್ನು ಮಾಡಬಹುದಾಗಿದೆ. ದೀರ್ಘ ನಡಿಗೆ, ಮೆಟ್ಟಿಲು ಹತ್ತಿಳಿಯುವುದು, ಕುಳಿತು- ಎದ್ದು ಮಾಡುವುದು ಹೀಗೆ ಪ್ರತಿಯೊಂದು ಕೆಲಸವನ್ನೂ ಮೊದಲಿನಂತೆ ಮಾಡುವ ಸ್ಥಿತಿಸ್ಥಾಪಕತ್ವವನ್ನು ಈ ಶಸ್ತ್ರಚಿಕಿತ್ಸೆ ನೀಡುತ್ತದೆ ಎಂದು ಹೇಳಿದರು.ಯೆನೆಪೋಯ ಆಸ್ಪತ್ರೆಯ ಮುಖ್ಯ ಆರ್ಥೋಪೆಡಿಕ್ ಹಾಗೂ ಮಂಡಿ ಬದಲಾವಣೆ ಸರ್ಜನ್ ಡಾ.ದೀಪಕ್ ರೈ ಅವರು ಭಾರತದ ಮೊದಲ ಸ್ಕೈವಾಕರ್ ಸರ್ಜರಿಯನ್ನು ಯೆನೆಪೋಯದಲ್ಲಿ ಈಗಾಗಲೇ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಈ ವ್ಯವಸ್ಥೆಯು ಮಂಡಿಯ ಸಹಜ ಚಲನೆಗೆ ಬೇಕಾದ ನಿಖರತೆಯನ್ನು ಒದಗಿಸುತ್ತದೆ ಎಂದು ಅವರು ವಿವರಿಸಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!