ಆರೋಗ್ಯಕ್ಕಾಗಿ ಫಿಟ್ ಹಾಸನ್ ಮ್ಯಾರಥಾನ್

KannadaprabhaNewsNetwork |  
Published : Jul 06, 2026, 01:45 AM IST
5ಎಚ್ಎಸ್ಎನ್4 :  | Kannada Prabha

ಸಾರಾಂಶ

ದೈಹಿಕ ಸದೃಢತೆ ಹಾಗೂ ಪರಿಸರ ಜಾಗೃತಿಯನ್ನು ಸಮಾಜದಲ್ಲಿ ಬೆಳೆಸುವ ಉದ್ದೇಶದಿಂದ ಕುವೆಂಪು ಯುವಕರ ಸಂಘದ ವತಿಯಿಂದ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ‘ಫಿಟ್ ಹಾಸನ್ ಮ್ಯಾರಥಾನ್ – ನಮ್ಮ ನಡೆ...ಆರೋಗ್ಯದ ಕಡೆ’ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಎದುರು ಶ್ರೀ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಹಾಸನ ಕ್ಷೇತ್ರದ ಶಾಸಕ ಎಚ್. ಪಿ. ಸ್ವರೂಪ್ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಆರೋಗ್ಯಕರ ಜೀವನಶೈಲಿ, ದೈಹಿಕ ಸದೃಢತೆ ಹಾಗೂ ಪರಿಸರ ಜಾಗೃತಿಯನ್ನು ಸಮಾಜದಲ್ಲಿ ಬೆಳೆಸುವ ಉದ್ದೇಶದಿಂದ ಕುವೆಂಪು ಯುವಕರ ಸಂಘದ ವತಿಯಿಂದ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ‘ಫಿಟ್ ಹಾಸನ್ ಮ್ಯಾರಥಾನ್ – ನಮ್ಮ ನಡೆ...ಆರೋಗ್ಯದ ಕಡೆ’ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಎದುರು ಶ್ರೀ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಹಾಸನ ಕ್ಷೇತ್ರದ ಶಾಸಕ ಎಚ್. ಪಿ. ಸ್ವರೂಪ್ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಸ್ವಾಮೀಜಿ, ಆರೋಗ್ಯವೇ ಜೀವನದ ಅಮೂಲ್ಯ ಸಂಪತ್ತು ಎಂಬ ಸಂದೇಶವನ್ನು ಸಾರಿದ ಈ ಮ್ಯಾರಥಾನ್ ಸಾರ್ವಜನಿಕರ ಗಮನ ಸೆಳೆಯಿತು. ಆರೋಗ್ಯಕರ ದೇಹದಲ್ಲೇ ಆರೋಗ್ಯಕರ ಮನಸ್ಸು ನೆಲೆಸಿರುತ್ತದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿಯಮಿತ ವ್ಯಾಯಾಮ, ಯೋಗ, ಶಿಸ್ತುಬದ್ಧ ಜೀವನ ಹಾಗೂ ಪ್ರಕೃತಿ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಯುವಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸಿದರು. ನಂತರ ಮಾತನಾಡಿದ ಶಾಸಕ ಹೆಚ್.ಪಿ. ಸ್ವರೂಪ್, ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನಿಯಮಿತ ಆಹಾರ ಪದ್ಧತಿ, ಮಾನಸಿಕ ಒತ್ತಡ, ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ, ಮದ್ಯಪಾನ ಸೇರಿದಂತೆ ದುಶ್ಚಟಗಳು ಹಾಗೂ ಪರಿಸರ ಮಾಲಿನ್ಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯಕರ ಬದುಕಿನ ಬಗ್ಗೆ ಅರಿವು ಮೂಡಿಸಲು ಆಯೋಜಿಸಿರುವ ‘ಫಿಟ್ ಹಾಸನ್ ಮ್ಯಾರಥಾನ್’ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವ್ಯಾಯಾಮದತ್ತ ಗಮನಹರಿಸಿ:

ಪ್ರತಿಯೊಬ್ಬರೂ ದಿನನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ವಾಕಿಂಗ್, ಜಾಗಿಂಗ್ ಅಥವಾ ವ್ಯಾಯಾಮವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು. ನಿಯಮಿತ ದೈಹಿಕ ಚಟುವಟಿಕೆಗಳಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯ ಎಂದರು. ಯುವಜನರು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಸೀಮಿತರಾಗದೇ ಕ್ರೀಡೆ ಮತ್ತು ವ್ಯಾಯಾಮದತ್ತ ಹೆಚ್ಚು ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.

ವಿಜೇತರಿಗೆ ಬಹುಮಾನ:

ಮ್ಯಾರಥಾನ್‌ನಲ್ಲಿ ಪುರುಷರಿಗೆ 5 ಕಿ. ಮೀ. ಹಾಗೂ ಮಹಿಳೆಯರಿಗೆ 3 ಕಿ. ಮೀ. ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ವಿವಿಧ ವಯೋಮಾನದ ಸ್ಪರ್ಧಿಗಳು ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಟಿ-ಶರ್ಟ್, ಉಪಾಹಾರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.

ಕುವೆಂಪು ಯುವಕರ ಸಂಘದ ವತಿಯಿಂದ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ನಗರದ ವಿವಿಧ ಸಂಘಸಂಸ್ಥೆಗಳು, ಪೊಲೀಸ್ ಇಲಾಖೆ, ಕ್ರೀಡಾ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಕುವೆಂಪು ಯುವಕರ ಸಂಘದ ಅಧ್ಯಕ್ಷ ಐ. ಜಿ. ಗಿರೀಶ್ ಕುಮಾರ್‌, ರಂಗೇಗೌಡ, ಕಂಚಮಾರನಹಳ್ಳಿ ಕಾಂತರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ್ ರಘು, ಕುವೆಂಪು ಯುವಕರ ಸಂಘದ ಗೌರವಾಧ್ಯಕ್ಷ ಡಾ. ಸಿ. ಎನ್. ಜಗದೀಶ್, ಜಿ. ಸಿ. ಧರ್ಮರಾಜ್, ರಾಜೇಶ್, ದಯಾನಿಧಿ, ಸ್ಕೌಟ್ ಅಂಡ್ ಗೈಡ್ಸ್‌ನ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತ್ತೊಮ್ಮೆ ಮೇಲುಕೋಟೆ ಬರುತ್ತೇನೆ: ಡಾ.ನಾಗಲಕ್ಷ್ಮಿ ಚೌಧರಿ
ರೈತರ ಬಾಕಿ 50 ರು. ನೀಡದೆ ಕಬ್ಬು ಅರೆಯುವಿಕೆ ಆರಂಭ: ಆಕ್ರೋಶ