ಯುವತಿಯ ಮನೆಗೆ ನುಗ್ಗಿಹಲ್ಲೆ ನಡೆಸಿದ ಐವರ ಬಂಧನ

KannadaprabhaNewsNetwork |  
Published : Apr 07, 2026, 04:15 AM IST
Asura khatun | Kannada Prabha

ಸಾರಾಂಶ

ಯುವತಿಯೊಬ್ಬಳ ಮೇಲೆ ಅನುಮಾನ ವ್ಯಕ್ತಪಡಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ವರ್ತೂರು ಪೊಲೀಸ್ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯುವತಿಯೊಬ್ಬಳ ಮೇಲೆ ಅನುಮಾನ ವ್ಯಕ್ತಪಡಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ವರ್ತೂರು ಪೊಲೀಸ್ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ವರ್ತೂರು ನಿವಾಸಿಯಾದ 20 ವರ್ಷದ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಬಾಪುನ್‌, ಪತಾಯ್, ಸುಕ್ಷಪರ್ ಖಾತುನ್, ಸೀಮಾ, ಅಸುರಾ ಖಾತುನ್ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಜಂಶಿದ್, ಟೂಕೋನ್ ಮತ್ತು ನೂರ್ ಎಂಬುವರು ತಲೆಮರಿಸಿಕೊಂಡಿದ್ದು ಅವರ ಪತ್ತೆಗೆ ಶೋಧ ನಡೆಸಲಾಗಿದೆ.

ಯುವತಿಯು ಮನೆಯಲ್ಲಿ ಯುವಕನೋರ್ವನ ಜತೆಗಿದ್ದಾಳೆ ಎಂಬ ಶಂಕೆಯ ಮೇರೆಗೆ ಆಕೆಯನ್ನು ಮನೆಯಿಂದ ಹೊರಗೆ ಎಳೆದು ತಂದು ಅಮಾನವೀಯವಾಗಿ ಹಲ್ಲೆ ನಡೆಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯುವತಿಯ ಮನೆಗೆ ನುಗ್ಗಿದ್ದ ಆರೋಪಿಗಳು ನಮ್ಮ ಊರಿಗೆ ಬಂದು ವೇಶ್ಯಾವಾಟಿಕೆ ನಡೆಸುತ್ತೀರಾ? ಎಂದು ಕಿರುಚುತ್ತಾ ದಾಳಿ ಮಾಡಿದ್ದಾರೆ. ಯುವತಿಯನ್ನು ಮನೆಯಿಂದ ಹೊರಕ್ಕೆ ಎಳೆದು ತಂದು ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಪಡೆದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

ತಾನು ಲೇಬರ್ ಶೆಡ್‌ನಲ್ಲಿ ವಾಸವಾಗಿದ್ದು, ಕೆಲಸಕ್ಕೆ ಹೋಗುವಾಗ ಬರುವಾಗ ಮನೆಯ ಹತ್ತಿರದ ಕೆಲವು ಹುಡುಗರು ತನ್ನನ್ನು ಹಿಂಬಾಲಿಸುತ್ತಿದ್ದು ಅವರಿಗೆ ಹಿಂಬಾಲಿಸದಂತೆ ಎಚ್ಚರಿಕೆ ನೀಡಿದ್ದೆ. ಅವರು ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಶುಕ್ರವಾರ 9.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದೆ. ರಾತ್ರಿ 10.30ರ ಸುಮಾರಿಗೆ ತನ್ನ ಮನೆಯ ಹತ್ತಿರ ಬಂದ ಜಂಶಿದ್, ಟುಕೋನ್, ಬಾಪುನ್, ನೂರ್ ಅವರು ತಮ್ಮ ಜತೆ ಇತರೆ ಕೆಲವು ಮಂದಿಯನ್ನು ಕರೆದುಕೊಂಡು ಬಂದು ಏಕಾಏಕಿ ತನ್ನ ಮೇಲೆ ಜಗಳ ತೆಗೆದು ಕೈಗೆ ಸಿಕ್ಕ ದೊಣ್ಣೆ ಮತ್ತು ಕೋಲುಗಳಿಂದ ಹಿಗ್ಗಾ ಮಗ್ಗ ಹೊಡೆದಿದ್ದಾರೆ. ನನಗೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಚಾಲಕರಿಗೆ 20000 ಪರಿಹಾರಕ್ಕೆ ಆಗ್ರಹ
ನಿರ್ಲಕ್ಷ್ಯ ಚಾಲನೆಯಿಂದ ಬೈಕ್‌ಗೆಡಿಕ್ಕಿ: ಟೆಕ್ಕಿಗೆ ಹೈಕೋರ್ಟ್‌ ತರಾಟೆ