ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ಕರ್ನಾಟಕ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕರ್ನಾಟಕ ಸಂಶೋಧಕರ ಒಕ್ಕೂಟ ಶನಿವಾರ ಆಯೋಜಿಸಿದ್ದ ‘ಸದನದಲ್ಲಿ ಎಚ್.ಕೆ. ಪಾಟೀಲ’ ಐದು ಸಂಪುಟಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸದನದಲ್ಲಿ ಸುದೀರ್ಘ ಕಾಲ ಅವರು ಮಾಡಿದ ಭಾಷಣ, ಚರ್ಚೆ, ಮಂಡಿಸಿದ ವಿಚಾರಗಳನ್ನು ಸಮಾಜಕ್ಕೆ ಅರ್ಪಿಸುವ ಕೆಲಸ ಈ ಕೃತಿ ಮೂಲಕ ಆಗಿದೆ. ಗ್ರಂಥಾಲಯದ ಮೂಲಕ ಈ ಸಂಪುಟಗಳು ಸಾರ್ವಜನಿಕರಿಗೆ ತಲುಪುವ ಕಾರ್ಯವಾಗಬೇಕು. ಯುವಕರಿಗೆ, ರಾಜಕಾರಣಿಗಳಿಗೆ ಈ ಕೃತಿಗಳು ಪ್ರೇರಣೆ ನೀಡಲಿ ಎಂದು ಹಾರೈಸಿದರು.ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ ಮಾತನಾಡಿ, ಚಿಂತಕ ಚಾವಡಿ ಎಂದು ವಿಧಾನ ಪರಿಷತ್ತಿಗೆ ಕರೆಯುತ್ತಾರೆ. ಆದರೆ, ಪರಿಷತ್ ಕೆಲವೇ ರಾಜ್ಯದಲ್ಲಿ ಇದೆ. ಇದಕ್ಕೆ ಕೇಂದ್ರ ಸರ್ಕಾರ ಒಂದು ರಾಷ್ಟ್ರೀಯ ನೀತಿ ರೂಪಿಸಬೇಕು. ಎಲ್ಲ ರಾಜ್ಯಗಳಲ್ಲೂ ಪರಿಷತ್ ಇರುವಂತೆ ನೀತಿ ರೂಪಿಸಬೇಕು. ಇದಲ್ಲದೆ ವಿಧಾನಸಭೆ ಕ್ಷೇತ್ರಗಳ ಬದಲಾವಣೆ ಆಗಾಗ ಆಗುತ್ತದೆ. ಆದರೆ ಪರಿಷತ್‌ನಲ್ಲಿ ಇದಾಗುತ್ತಿಲ್ಲ. ಈ ಕುರಿತು ಸಹ ಕೇಂದ್ರ ಸರ್ಕಾರ ಗಮನಿಸಬೇಕು ಎಂದ ಅವರು, ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡುವ ಕುರಿತು ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು. ಜಿಲ್ಲೆಗೊಂದು ವಿವಿ ಮಾಡಿದರೆ ಗುಣಮಟ್ಟ ಉಳಿಯುವುದಿಲ್ಲ. ಹೀಗಾಗಿ, ಪುನರ್ ಪರಿಶೀಲನೆ ಮಾಡಬೇಕು. ಚುನಾವಣಾ ವ್ಯವಸ್ಥೆ ಸಹ ಸುಧಾರಣೆ ಆಗಬೇಕು ಎಂದು ಪ್ರತಿಪಾದಿಸಿದರು.
ಸಿಎಂ ಆಗುವ ಅವಕಾಶವಿದೆ:
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಎಚ್.ಕೆ. ಪಾಟೀಲ ಕಾರ್ಯ ಸ್ಮರಣೀಯ. ಸಹಕಾರಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ಸಂಪುಟಗಳು ಯುವ ಪೀಳಿಗೆಗೆ ಮಾದರಿಯಾಗಲಿ. ತಾಳ್ಮೆ, ಸಹನೆ ಅವರಲ್ಲಿದೆ. ಅವರಿಂದ ಯುವ ಪೀಳಿಗೆ ಕಲಿಯುವುದು ಸಾಕಷ್ಟಿದೆ. ಪಾಟೀಲರಿಗೆ ಮುಖ್ಯಮಂತ್ರಿ ಆಗುವ ಅವಕಾಶವೂ ಇದೆ ಎಂದು ಭವಿಷ್ಯ ನುಡಿದರು.ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯದ ಪ್ರತಿ ಶಾಸಕರು ಐದು ವರ್ಷಗಳ ಸಾಧನೆಯ ಪುಸ್ತಕವನ್ನು ಪ್ರಕಟಿಸಿ ಜನರಿಗೆ ವಿತರಿಸುವ ಸಲಹೆ ನೀಡಿದರು. ಮಾಜಿ ಸಭಾಪತಿಗಳಾದ ಬಿ.ಎಲ್. ಶಂಕರ ಹಾಗೂ ವೀರಣ್ಣ ಮತ್ತಿಕಟ್ಟಿ ಮಾತನಾಡಿದರು. ಕೇಂದ್ರಿಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಕಾ.ತ. ಚಿಕ್ಕಣ್ಣ, ನೂರಹ್ಮದ್ ಮಕಾನದಾರ, ಡಾ. ರೇವಯ್ಯ ಒಡೆಯರ್, ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ವೇದಿಕೆಯಲ್ಲಿದ್ದರು.ಮಂತ್ರಿಸ್ಥಾನಕ್ಕಾಗಿ ಸಭಾಧ್ಯಕ್ಷ ಸ್ಥಾನ ನಿರಾಕರಿಸಬೇಡಿ
ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದು ಸಭಾಧ್ಯಕ್ಷ ಸ್ಥಾನ ನೀರಾಕರಿಸಬೇಡಿ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಮಂತ್ರಿ ಸ್ಥಾನಕ್ಕಾಗಿ ಹಠ ತೊಟ್ಟಿರುವ ಶಾಸಕರ ಬಗೆಗೆ ನಗೆ ಚಟಾಕಿ ಹಾರಿಸಿದರು.ಸದನದಲ್ಲಿ ಎಚ್.ಕೆ. ಪಾಟೀಲ್ ಸಂಪುಟಗಳ ಗ್ರಂಥ ಲೋಕಾರ್ಪಣೆ ಮಾಡಿದ ಅವರು, ಸಭಾಪತಿ ಸ್ಥಾನ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ಆ ಸ್ಥಾನ ಸಿಕ್ಕಾಗ ತೆಗೆದುಕೊಳ್ಳುವುದು ಒಳ್ಳೆಯದು. ಪುಸ್ತಕ ಲೋಕಾರ್ಪಣೆ ಅಷ್ಟೇ ಅಲ್ಲದೇ ಎಲ್ಲ ರೀತಿಯ ಗೌರವಯುತ ಜವಾಬ್ದಾರಿಗಳು ಸಭಾಧ್ಯಕ್ಷ ಸ್ಥಾನಕ್ಕೆ ಇದೆ. ಯುವ ಶಾಸಕರು ಇತ್ತೀಚೆಗೆ ಸಭಾಧ್ಯಕ್ಷ ಸ್ಥಾನ ಬೇಡ ಎಂದು ನೀರಾಕರಿಸಬೇಡಿ ಎಂದು ಸಲಹೆ ನೀಡಿದರು.