ಕಾರವಾರ: ದೋಷಪೂರಿತ ಸಾಧ್ಯತಾ ವರದಿ ಹಾಗೂ ಅವೈಜ್ಞಾನಿಕ ಡಿಪಿಆರ್ ಆಧರಿಸಿ ರೂಪಿಸಿರುವ ಬೇಡ್ತಿ- ಹಿರೇವಡ್ಡಟ್ಟಿ(ವರದಾ) ನದಿ ಜೋಡಣೆ ಯೋಜನೆಯನ್ನು ಒಪ್ಪಲು ಹೇಗೆ ಸಾಧ್ಯ ನದಿಯ ವಾಸ್ತವ ಸ್ಥಿತಿ, ಪರಿಸರದ ಮೇಲಿನ ಪರಿಣಾಮ ಹಾಗೂ ರೈತರ ಹಿತಾಸಕ್ತಿಗಳನ್ನು ಪರಿಗಣಿಸದೆ ಯೋಜನೆ ರೂಪಿಸುವುದು ಸರಿಯಲ್ಲ ಎಂದು ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗುರುವಾರ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ನಡೆದ ಸಭೆಯಲ್ಲಿ ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಮಠಾಧೀಶರು, ರೈತ ಮುಖಂಡರು, ವಿಜ್ಞಾನಿಗಳು ಹಾಗೂ ನೀರಾವರಿ ತಜ್ಞರು ಪಾಲ್ಗೊಂಡು ಯೋಜನೆಯ ಪರಿಸರ, ತಾಂತ್ರಿಕ ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವರ್ಣವಲ್ಲೀ ಶ್ರೀಗಳು, ನದಿ ಮತ್ತು ಕೆರೆಗಳ ವಿಚಾರದಲ್ಲಿ ಸಂತರೇ ಮುಂದಾಳತ್ವ ವಹಿಸಿ ನಡೆಸುತ್ತಿರುವ ಮೊದಲ ಚಿಂತನಾ ಗೋಷ್ಠಿ ಇದಾಗಿದೆ. ಮಲೆನಾಡು ಹಾಗೂ ಬಯಲುಸೀಮೆ ಎರಡೂ ಭಾಗಗಳ ರೈತರು ಸಂಕಷ್ಟದಲ್ಲಿದ್ದಾರೆ. ಪಶ್ಚಿಮ ಘಟ್ಟದ ಪರಿಸರಕ್ಕೆ ಧಕ್ಕೆಯಾಗದಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಎತ್ತಿನಹೊಳೆ ಯೋಜನೆಯ ಮಾದರಿಯ ದುರಂತ ಉತ್ತರ ಕನ್ನಡ ಜಿಲ್ಲೆಗೆ ಬೇಡ. ಆದರೆ ಎಲ್ಲ ವಿಚಾರಗಳ ಬಗ್ಗೆಯೂ ಮುಕ್ತ ಚರ್ಚೆ ನಡೆಯಬೇಕು ಎಂದರು.ಡಾ. ಬಾಲಚಂದ್ರ ಸಾಯಿಮನೆ ಮಾತನಾಡಿ, ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಸ್ಥಿತಿಗತಿಗಳನ್ನು ಗಮನಿಸಿದರೆ ಬೇಡ್ತಿ-ಅಘನಾಶಿನಿ ಕಣಿವೆಗಳ ಪರಿಸರ ಧಾರಣ ಸಾಮರ್ಥ್ಯ ಈಗಾಗಲೇ ಗಂಭೀರ ಒತ್ತಡದಲ್ಲಿದೆ. ದಕ್ಷಿಣ ಭಾರತದ ಅಮೂಲ್ಯ ಅರಣ್ಯ ಸಂಪತ್ತನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಬೃಹತ್ ಯೋಜನೆಗಳಿಂದ ಕಾಡುಗಳ ನಾಶವಾಗುವ ಆತಂಕವಿದೆ ಎಂದರು.
ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಬೃಹತ್ ಯೋಜನೆಗಳಿಂದ ನಿಸರ್ಗ ಮತ್ತು ಸಂಸ್ಕೃತಿಯ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಎಚ್ಚರಿಸಿದರು. ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಕಳೆದ 40 ವರ್ಷಗಳಿಂದ ನಡೆಯುತ್ತಿರುವ ಕಣಿವೆ ಉಳಿಸಿ ಚಳವಳಿಯ ಹಿನ್ನೆಲೆ ವಿವರಿಸಿದರು.
ಹೆಚ್ಚುವರಿ ನೀರಿಗೆ ಆಗ್ರಹ: ಹಾವೇರಿ ಜಿಲ್ಲೆಯ ಸಂತರನ್ನು ಪ್ರತಿನಿಧಿಸಿ ಮಾತನಾಡಿದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು, ಹಾವೇರಿ- ಗದಗ ಭಾಗದ ರೈತರಿಗೆ ಬೇಡ್ತಿ ನದಿಯ ಹೆಚ್ಚುವರಿ ನೀರು ದೊರೆಯಬೇಕು ಎಂಬುದು ನಮ್ಮ ಆಶಯ. ಇಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು ಬಂದಿದ್ದೇವೆ. ಸ್ವರ್ಣವಲ್ಲೀ ಶ್ರೀಗಳೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಹಾವೇರಿಯ ನಿವೃತ್ತ ಎಂಜಿನಿಯರ್ ಚೆನ್ನಯ್ಯ ಅವರು ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಕರ್ಕಿಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಶಿರಳಗೆಯ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹಾಗೂ ಜಡೆ ಮಠದ ಮಹಾಂತ ಸ್ವಾಮೀಜಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹಲವು ಮಠಾಧೀಶರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಹಾವೇರಿ ಜಿಲ್ಲೆಯ ಮಠಾಧೀಶರು ಆಗಮಿಸುವ ಸಂದರ್ಭದಲ್ಲಿ ಯಲ್ಲಾಪುರದ ಬೇಡ್ತಿ ಸೇತುವೆ ಬಳಿ ನದಿ ವೀಕ್ಷಣೆ ನಡೆಸಿದರು. ಸಂಚಾಲಕ ನರಸಿಂಹ ಸಾತೊಡ್ಡಿ ನದಿಯಲ್ಲಿನ ನೀರಿನ ಸ್ಥಿತಿಗತಿ ವಿವರಿಸಿದರು.