ಕನ್ನಡಪ್ರಭ ವಾರ್ತೆ ಬೆಂಗಳೂರು
ಸೋಮವಾರ ಸಂಜೆ ಸುರಿದ ಮಳೆಗೆ ನಗರದ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ವೀರಣ್ಯ ಪಾಳ್ಯ ಫ್ಲೈಓವರ್‌ನಲ್ಲಿ ಭಾರಿ ಪ್ರಮಾಣದ ನೀರು ನಿಲುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಗವಾರದಿಂದ ಮಹದೇವಪುರವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೈರಾಣಾದರು. ಅದೇ ರೀತಿ ನಗರದ ಅತಿ ಉದ್ದದ ಫ್ಲೈಓವರ್‌ಗಳಲ್ಲಿ ಒಂದಾಗಿರುವ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಕೂಡ ಮಳೆ ಬಂದಾಗ ಅಲ್ಲಲ್ಲಿ ನೀರು ನಿಲ್ಲುತ್ತದೆ.
ಜಲಪಾತವೇ ಸೃಷ್ಟಿ: ಇನ್ನು ತುಮಕೂರು ರಸ್ತೆಯ ಫ್ಲೈಓವರ್‌ನ ಟಿ. ದಾಸರಹಳ್ಳಿ ಬಳಿ ಪ್ರತಿ ಬಾರಿ ಮಳೆ ಬಂದಾಗಲೂ ಜಲಪಾತ ಸೃಷ್ಟಿಯಾಗುತ್ತಿದೆ. ಫ್ಲೈಓವರ್‌ನಿಂದ ಜಲಪಾತದಂತೆ ಸುರಿಯುವ ನೀರು ಕೆಳಗೆ ಸಂಚರಿಸುವ ವಾಹನಗಳ ಬೀಳುತ್ತದೆ. ವಿಡಿಯೋ ಮಾಡುವ ಸಾರ್ವಜನಿಕರು ಇದು ‘ಜೋಗ ಜಲಪಾತ ಅಲ್ಲ. ದಾಸರಹಳ್ಳಿ ಜಲಪಾತ’ ಎಂದು ವ್ಯಂಗ್ಯ ಮಾಡಿ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ.ಅದೇ ರೀತಿ ಮೈಸೂರು ರಸ್ತೆಯ ಸಿರ್ಸಿ ಫ್ಲೈಓವರ್, ನಾಯಂಡಹಳ್ಳಿ ಫ್ಲೈಓವರ್ ಮೇಲೂ ನೀರು ನಿಲ್ಲುತ್ತದೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಫ್ಲೈಓವರ್ ಮೇಲೆ ಮಳೆ ಬಂದಾಗ ಅಲ್ಲಲ್ಲಿ ನೀರು ನಿಲ್ಲುವ ಕುರಿತು ಸಾರ್ವಜನಿಕರು ದೂರು ಹೇಳಿಕೊಂಡಿದ್ದಾರೆ.
ಧೀರ್ಘಾವಧಿಯಲ್ಲಿ ಮಳೆ ನೀರು ನಿಂತುಕೊಂಡರೇ ಫ್ಲೈಓವರ್‌ಗಳ ದುರ್ಬಲಗೊಳ್ಳುವ ಆತಂಕವೂ ಇರುತ್ತದೆ. ಹೀಗಾಗಿ, ಫ್ಲೈಓವರ್‌ಗಳ ಮೇಲೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಫ್ಲೈಓವರ್ ಕೆಳಗೆ ಸಿಡಿಯುವ ನೀರು