- ಆರನೇ ಜಿಲ್ಲಾ ಜಾನಪದ ಸಮ್ಮೇಳನದ ಪೂರ್ವಭಾವಿ ಸಭೆ । ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಸಮ್ಮೇಳನ
ಆಧುನಿಕತೆ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಜಾನಪದ ಸಮ್ಮೇಳನಗಳು ಮತ್ತು ಕಾರ್ಯಕ್ರಮ ನಿರಂತರವಾಗಿ ಎಲ್ಲೆಡೆ ನಡೆಯಬೇಕು ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಸಲಹೆ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನಿಂದ ನಗರದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಆರನೇ ಜಿಲ್ಲಾ ಜಾನಪದ ಸಮ್ಮೇಳ ನದ ಪೂರ್ವಭಾವಿ ಸಭೆಯನ್ನು ಭಾನುವಾರ ಪ್ರವಾಸಿ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಮೂಲಬೇರಾದ ಜಾನಪದ ಇಂದು ಆಧುನಿಕತೆ ಅಬ್ಬರದಲ್ಲಿ ಮೂಲೆ ಗುಂಪಾಗುತ್ತಿದೆ ಇದಕ್ಕೆ ಮೂಲ ಕಾರಣ ನಮ್ಮ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯ ಗೀಳು ಮತ್ತು ವ್ಯಾಮೋಹ ಎಂದ ಅವರು, ಜಾನಪದ ಸಮ್ಮೇಳನ, ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವುದರಿಂದ ಯುವ ಜನತೆಯನ್ನು ಜಾನಪದದತ್ತ ಹೊರಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.6 ನೇ ಜಿಲ್ಲಾ ಜಾನಪದ ಸಮ್ಮೇಳನವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸುವಂತೆ ಸಲಹೆ ಮಾಡಿದ ಅವರು, ಎಲ್ಲರೂ ತನು, ಮನ, ಧನದೊಂದಿಗೆ ಸಹಕರಿಸಬೇಕು. ಸಮ್ಮೇಳನದ ಯಶಸ್ಸಿಗೆ ದುಡಿಯಬೇಕು ಎಂದು ಕರೆ ನೀಡಿದರು.ಜಿಲ್ಲಾ ಜಾನಪದ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಮಹಿಳಾ ಜಾನಪದ ಕಲಾವಿದರನ್ನು ಆಯ್ಕೆ ಮಾಡುವಂತೆ ಸಲಹೆ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ 8 ವರ್ಷಗಳ ತಮ್ಮ ಅವಧಿಯಲ್ಲಿ 30 ತಾಲೂಕು ಜಾನಪದ ಸಮ್ಮೇಳನಗಳನ್ನು 40ಕ್ಕೂ ಹೆಚ್ಚು ಹೋಬಳಿ ಸಮ್ಮೇಳನಗಳನ್ನು ನಡೆಸಲಾಗಿದೆ, ಈಗಾಗಲೇ ಐದು ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ನಡೆಸಲಾಗಿದ್ದು ಇದೀಗ ಆರನೇ ಸಮ್ಮೇಳನವನ್ನು ಏಪ್ರಿಲ್ ತಿಂಗಳಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.ಸಮ್ಮೇಳನವನ್ನು ವೈಶಿಷ್ಟ್ಯ ಪೂರ್ಣವಾಗಿ ಮತ್ತು ಅತ್ಯಂತ ವೈಭವದಿಂದ ನಡೆಸಲಾಗುತ್ತಿದ್ದು ಅದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ತಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಸಮ್ಮೇಳನಕ್ಕೆ ಮುನ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನಗರದಲ್ಲಿ ಜಾನಪದ ಕಲಾತಂಡಗಳ ನಡುವೆ ಅದ್ಧೂರಿಯಾಗಿ ನಡೆಸಲಾಗುವುದು. ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವಿವಿಧ ಗೋಷ್ಠಿಗಳನ್ನು ನಡೆಸಿ, ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲಾಗುವುದು. ಸಮ್ಮೇಳನದಲ್ಲಿ ಜಾನಪದ ಕಲೆಗಳ ಪ್ರದರ್ಶನ ಆಯೋಜಿಸಲಾಗುವುದು ಎಂದು ತಿಳಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾವಿನಕೆರೆ ದಯಾನಂದ್ ಮಾತನಾಡಿ, ಜಾನಪದ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಲ್ಲಿ ಯುವ ಜನತೆ ಪಾಲ್ಗೊಳ್ಳುವಂತೆ ಮಾಡಬೇಕು, ಅಂತರ್ಜಾಲದಲ್ಲಿ ಜಾನಪದ ಕುರಿತ ವೇದಿಕೆ ಯೊಂದನ್ನು ಸ್ಥಾಪಿಸಿ, ಹಿರಿಯ ಜಾನಪದ ಕಲಾವಿದರನ್ನು ಅದರಲ್ಲಿ ದಾಖಲಿಸುವ ಕೆಲಸ ಮಾಡಬೇಕು ಎಂದರು.ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ ಮಾತನಾಡಿ, ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ದುಡಿಯಬೇಕು ಎಂದು ಹೇಳಿದರು.ಸಮ್ಮೇಳನಾಧ್ಯಕ್ಷರ ಆಯ್ಕೆ, ಮೆರವಣಿಗೆ, ಘೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು, ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಜಿ.ಬಿ. ವಿರೂಪಾಕ್ಷ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ತಿಪ್ಪೇಶ್, ಸಂಚಾಲಕಿ ಗಾಯತ್ರಿ, ಅಜ್ಜಂಪುರ ತಾಲೂಕು ಗೌರವಾಧ್ಯಕ್ಷ ಮರುಳಸಿದ್ದಪ್ಪ, ಮೂಡಿಗೆರೆ ತಾಲೂಕು ಅಧ್ಯಕ್ಷ ಕುನ್ನಳ್ಳಿ ರವಿ, ಗೌರವಾಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷ ಚಂದ್ರೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ, ಹರಿಹರಪುರ ಹೋಬಳಿ ಅಧ್ಯಕ್ಷೆ ತಮನ್ನಾ, ಉಪಾಧ್ಯಕ್ಷೆ ಸುಮಾ, ಜಾನಪದ ಕಲಾವಿದರಾದ ರುದ್ರಪ್ಪ, ಅನಂತೇಗೌಡ, ಸಂದೀಪ್, ಸಚಿನ್ ಸಿಂಗ್, ಶಂಕರಪ್ಪ, ವಿನೋದಾ, ಸುಜಾತಾ, ವಾಸಂತಿ, ಬಸವೇಗೌಡ, ಶಿವನಂಜೇಗೌಡ, ಶಂಕರಯ್ಯ ಉಪಸ್ಥಿತರಿದ್ದರು. 18 ಕೆಸಿಕೆಎಂ 3ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಆರನೇ ಜಿಲ್ಲಾ ಜಾನಪದ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಡಾ. ಜೆ.ಪಿ. ಕೃಷ್ಣೇಗೌಡ ಉದ್ಘಾಟಿಸಿದರು.