ಜನಪದ ಸಾಹಿತ್ಯ ಎಲ್ಲ ಸಾಹಿತ್ಯದ ತಾಯಿಬೇರಾಗಿದೆ. ಜನಪದರು ತಮ್ಮ ಅನುಭವ ಮತ್ತು ವರ್ತಮಾನದ ಚರಿತ್ರೆಯನ್ನು ರಾಗ ಬದ್ಧವಾಗಿ ಹಾಡುವ ಮೂಲಕ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಚರಿತ್ರೆಯನ್ನು ರವಾನಿಸಿದ ಸಾಂಸ್ಕೃತಿಕ ರಾಯಭಾರಿಗಳು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಗದಗ: ಜನಪದ ಸಾಹಿತ್ಯ ಎಲ್ಲ ಸಾಹಿತ್ಯದ ತಾಯಿಬೇರಾಗಿದೆ. ಜನಪದರು ತಮ್ಮ ಅನುಭವ ಮತ್ತು ವರ್ತಮಾನದ ಚರಿತ್ರೆಯನ್ನು ರಾಗ ಬದ್ಧವಾಗಿ ಹಾಡುವ ಮೂಲಕ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಚರಿತ್ರೆಯನ್ನು ರವಾನಿಸಿದ ಸಾಂಸ್ಕೃತಿಕ ರಾಯಭಾರಿಗಳು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2795ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಡೊಳ್ಳಿನ ಹಾಡುಗಳಲ್ಲಿ ಶರಣರ ಚರಿತ್ರೆ ಎಂಬ ವಿಷಯದ ಕುರಿತು ಮಾತನಾಡಿದ ಗಜೇಂದ್ರಗಡದ ಸಿದ್ಧರಾಮ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಕರಿಯಪ್ಪ ಕೊಡವಳ್ಳಿ, ಶರಣರ ಆದರ್ಶ ಬದುಕನ್ನು ಹಾಲುಮತದ ಜನಾಂಗದವರು ಡೊಳ್ಳಿನ ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಚರಿತ್ರೆಗಳು ಜನಪದರ ಬದುಕು ಬದಲಾಗಲು ಪ್ರೇರಣೆಯಾದವು ಎಂದರು.
ಇದೇ ವೇಳೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಶ್ರೀಗಳು, ಇಂದು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಸೌಲಭ್ಯಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಕುರ್ತಕೋಟಿಯ ಶ್ರೀ ಬೀರೇಶ್ವರ ಡೊಳ್ಳಿನ ಮೇಳದ ತಂಡದ ಸದಸ್ಯರು ಶರಣರ ಚರಿತ್ರೆಯ ಹಾಡುಗಳನ್ನು ಪ್ರಸ್ತುತಪಡಿಸಿದರು.
ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಸಾದ ಸುತಾರ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರವೀಣ್ ಕುಮಾರ ಸೊಬಗಿನ, ದ್ವಿತೀಯ ಸ್ಥಾನ ಪಡೆದ ಸಂಧ್ಯಾ ಲಮಾಣಿ, ತೃತೀಯ ಸ್ಥಾನ ಪಡೆದ ಸುಷ್ಮಾ ನಾಯಕ ಮತ್ತು ರೇವಂತರೆಡ್ಡಿ ಮುಂಡರಗಿ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಸಾದ ಸುತಾರ ಅವರಿಂದ ವಚನ ಸಂಗೀತ, ಅನುಶ್ರೀ ಅಗ್ಗದ ಅವರಿಂದ ಧರ್ಮ ಗ್ರಂಥ ಪಠಣ ಹಾಗೂ ಪ್ರೇಮ ಆರ್. ಓದಿಸೋಮಠ ಅವರಿಂದ ವಚನ ಚಿಂತನ ನೆರವೇರಿತು.
ಮಲ್ಲಪ್ಪ ದ್ಯಾಮಪ್ಪ ಕಾಬಳ್ಳಿ (ಪ್ರಭು ಮೆಡಿಕಲ್ಸ್) ದಾಸೋಹ ಸೇವೆ ಸಲ್ಲಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಶಿವಾನುಭವ ಸಮಿತಿ ಚೇರ್ಮನ್ ಡಾ. ರಮೇಶ ಮ. ಕಲ್ಲನಗೌಡರ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ದರಾಮೇಶ ಪಟ್ಟೇದ, ಪ್ರತಿಭಾ ಮು. ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕಮಠ, ಆದೇಶ ಎಸ್. ಅಂಗಡಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.