ಗೊರುಚರ ‘ಹೊನ್ನ ಬಿತ್ತೇವು..’ 3ನೇ ಆವೃತ್ತಿ ಬಿಡುಗಡೆ । ವಿವಿಧ ಸಾಧಕರಿಗೆ ಅಭಿನಂದನೆ
ಜಾನಪದರು ಮತ್ತು ಜನಪದ ಸಾಹಿತ್ಯ ಈ ದೇಶದ ಆಸ್ತಿ, ಜನಪದರು ಪುಸ್ತಕವನ್ನು ನೋಡಿದವರಲ್ಲಾ. ತಮ್ಮ ಜೀವನದ ಘಟನೆಗಳನ್ನು ಹಾಡಾಗಿ ಹಾಡುವ ಮೂಲಕ ತಮ್ಮ ದುಃಖ ದುಮಾನಗಳನ್ನು ಹಾಡುಗಳ ಮೂಲಕ ಪರಿಚಯಿಸಿದ್ದಾರೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನುಡಿದರು.
ನಗರದಲ್ಲಿ ಸುದ್ದಿರಾಜು ಪ್ರಕಾಶನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುವೆಂಪು ಕಲಾಮಂದಿರಲ್ಲಿ ಆಯೋಜಿಸಿದ್ದ ಗೊ.ರು.ಚನ್ನಬಸಪ್ಪ ಅವರ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಸ್ಮರಣ ಗ್ರಂಥದ 3ನೇ ಆವೃತ್ತಿ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಗೊ.ರು.ಚನ್ನಬಸಪ್ಪ ವಿರಚಿತ ‘ಹೊನ್ನ ಬಿತ್ತೇವು ಹೊಲಕ್ಕೆಲ್ಲ’ ಕೃತಿ 60 ವರ್ಷಗಳ ನಂತರ ಮೂರನೇ ಆವೃತ್ತಿ ಬಿಡುಗಡೆ ಯಾಗುತ್ತಿರುವುದು ಆ ಕೃತಿಯ ಮೌಲ್ಯತೆಗೆ ಸಾಕ್ಷಿ ಎಂದು ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಕೃತಿಯ ಗ್ರಂಥಕರ್ತ ಗೊ.ರು.ಚನ್ನಬಸಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಆಧುನಿಕತೆ ಸೆಳೆತಕ್ಕೆ ಸಿಲುಕಿ ನಮ್ಮ ಹಳ್ಳಿಗಳ ಬದುಕು ಬದಲಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಜಾನಪದ ವಿಶ್ವವಿದ್ಯಾಲಯ ಎಂಬುದು ಗ್ರಾಮೀಣ ಬುಡಕಟ್ಟು ಸಮುದಾಯಗಳ ಬದುಕಿಗೆ ನೇರ ಸಂಬಂಧ ಹೊಂದಿದೆ. ಪ್ರಯೋಗ, ಪ್ರಾತ್ಯಕ್ಷಿಕೆಗಳ ಮೂಲಕ ವಿಶ್ವವಿದ್ಯಾಲಯಗಳು ಕ್ರೀಯಾಶೀಲವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಗೊರುಚ ಕುರಿತು ಜಾನಪದ ಸಾಹಿತಿ ಬಸವರಾಜು ನೆಲ್ಲೀಸರ ಮಾತನಾಡಿದರು.
ಸುದ್ದಿರಾಜು ಪ್ರಕಾಶನದ ಎನ್ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ರವೀಶ್ ಕ್ಯಾತನಬೀಡು ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ, ರೈತ ಮುಖಂಡ ಗುರುಶಾಂತಪ್ಪ, ಬಿ.ಎಂ.ಮಂಜುನಾಥಸ್ವಾಮಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಎಂ. ಲೋಕೇಶ್ ಹಾಜರಿದ್ದರು.