ಜಾನಪದ ಚಕ್ರವರ್ತಿ ಗುರುರಾಜ ಹೊಸಕೋಟೆಗೆ ರಾಜ್ಯ‘ಬಿದರಿ ದತ್ತಿ ಪ್ರಶಸ್ತಿ’

KannadaprabhaNewsNetwork | Published : Nov 22, 2024 1:19 AM

ಸಾರಾಂಶ

ಬೀದರ್‌ನಲ್ಲಿ ಡಿ.14ರಂದು ಬಿದರಿ ಉತ್ಸವ 2024ರ ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿ.15ರಂದು ಬಿದರಿ ಶಹನಾಯಿ, ಬಿದರಿ ಸಂಗೀತೋತ್ಸವ ಹಾಗೂ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕನ್ನಡಪ್ರಭ ವಾರ್ತೆ, ಬೀದರ್‌

ಇಲ್ಲಿನ ‘ಬಿದರಿ’, ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಬರುವ ಡಿಸೆಂಬರ್‌ 14 ಮತ್ತು 15ರಂದು ಆಯೋಜಿಸಿರುವ ಬಿದರಿ ಉತ್ಸವ 2024ರ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿಗೆ ಖ್ಯಾತ ಚಿತ್ರನಟ ಹಾಗೂ ಹಿರಿಯ ಜನಪದ ಗಾಯಕರಾದ ಗುರುರಾಜ ಹೊಸಕೋಟೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಅಧ್ಯಕ್ಷೆ, ಗಾಯಕಿ ರೇಖಾ ಅಪ್ಪಾ ರಾವ್‌ ಸೌದಿ ತಿಳಿಸಿದ್ದಾರೆ.ಅವರು ನಗರದಲ್ಲಿ ನಡೆದ ಬಿದರಿ ಉತ್ಸವದ ಸಿದ್ಧತಾ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧರಿಸಿ ದತ್ತಿ ಪ್ರಶಸ್ತಿಗೆ ಆಯ್ಕೆಯನ್ನು ಘೋಷಿಸಿದ್ದು, ಬೀದರ್‌ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಬರುವ ಡಿಸೆಂಬರ್‌ 14 ಮತ್ತು 15ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಬಿದರಿ, ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಆಯೋಜಿಸಿರುವ ಬಿದರಿ ಉತ್ಸವದಲ್ಲಿ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಯನ್ನು ಡಿ.15ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಹಾಗೂ ಹಿರಿಯ ಜನಪದ ಗಾಯಕ ಗುರುರಾಜ ಹೊಸಕೋಟೆ ಅವರಿಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 15 ಸಾವಿರ ರುಪಾಯಿ ನಗದು, ಬಿದರಿ ಫಲಕ ಹಾಗೂ ಸನ್ಮಾನಗಳನ್ನು ಒಳಗೊಂಡಿರುತ್ತದೆ.ಹಿರಿಯ ಜಾನಪದ ಕಲಾವಿದರಾದ ಗುರುರಾಜ ಹೊಸಕೋಟೆ ಅವರು ಈಗಾಗಲೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಮಾನುಜ ಅನುಗ್ರಹ ಪುರಸ್ಕಾರ, ನೇತಾಜಿ ಪುರಸ್ಕಾರ, ಡಾ.ಅಂಬೇಡ್ಕರ್‌ ಪುರಸ್ಕಾರ, ಶಿಶುನಾಳ ಷರೀಫ್‌ ಪುರಸ್ಕಾರ, ಕೆಂಪೇಗೌಡ ಪುರಸ್ಕಾರ, ಪರಿಮಳ ಪ್ರಶಸ್ತಿ, ಬಸವ ಚೇತನ ಪುರಸ್ಕಾರ, ಕನ್ನಡ ಜ್ಯೋತಿ ಪುರಸ್ಕಾರ, ಗಾಂಧಿ ರಾಷ್ಟ್ರೀಯ ಶಾಂತಿ ಪುರಸ್ಕಾರ, ಬೆಂಗಳೂರು ರತ್ನ, ಜಾನಪದ ಗಾನ ಸಿರಿ, ಜಾನಪದ ಚಕ್ರವರ್ತಿ, ಜನಪದ ಬ್ರಹ್ಮ ಹಾಗೂ ಜಾನಪದ ಕೋಗಿಲೆ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ರಾಜ್ಯ ಮಟ್ಟದ 4ನೇ ಬಿದರಿ ದತ್ತಿ ಪ್ರಶಸ್ತಿ :

ಈಗಾಗಲೇ ಬಿದರಿ ದತ್ತಿ ಪ್ರಶಸ್ತಿಯನ್ನು ಹಿರಿಯ ಸಂಗೀತಗಾರ ಪಂಡಿತ್‌ ವೈಕುಂಠದತ್ತ ಮಹಾರಾಜ್‌, ವಿಶ್ವ ವಿಖ್ಯಾತ ಕ್ಲಾರಿಯೋನೇಟ್‌ ವಾದಕ ನರಸಿಂಹಲು ವಡವಾಟಿ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಲತಾ ಹಂಸಲೇಖಾ ಅವರಿಗೆ ನೀಡಲಾಗಿದ್ದು, ಈ ಬಾರಿ 20224ರ ಬಿದರಿ ದತ್ತಿ ಪ್ರಶಸ್ತಿಯನ್ನು ಗುರುರಾಜ ಹೊಸಕೋಟೆ ಅವರಿಗೆ ನೀಡಲಾಗುತ್ತಿದೆ.ಡಿ. 14ರಂದು ಬಿದರಿ ಉತ್ಸವ 2024ರ ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿ.15ರಂದು ಬಿದರಿ ಶಹನಾಯಿ, ಬಿದರಿ ಸಂಗೀತೋತ್ಸವ ಹಾಗೂ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದು, ಪೌರಾಡಳಿತ ಸಚಿವ ರಹೀಮ್‌ ಖಾನ್‌ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಹಿರಿಯ ಕಲಾವಿದರು, ಸಾಹಿತಿಗಳು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರೇಖಾ ಸೌದಿ ಪ್ರಕಟಣೆಯಲ್ಲಿ ಮನವಿಸಿದ್ದಾರೆ.

Share this article