ನೆರವಿನ ನಿರೀಕ್ಷೆಯಲ್ಲಿ ಹಸಿದವರಿಗೆ ಅನ್ನ ಜೋಳಿಗೆ!

KannadaprabhaNewsNetwork |  
Published : Nov 14, 2025, 03:30 AM IST
ಹಸಿದವರಿಗೆ ಅನ್ನ ಪೂರೈಸುತ್ತಿರುವ ಸುನಂದಾ ಕರಿಯಪ್ಪ ಶಿರಹಟ್ಟಿ. | Kannada Prabha

ಸಾರಾಂಶ

ಯಾವುದಾದರೂ ಸಭೆ, ಸಮಾರಂಭ, ಗೃಹ ಪ್ರವೇಶ, ಜನ್ಮದಿನ ಸೇರಿದಂತೆ ‌ವಿವಿಧ ಕಾರ್ಯಕ್ರಮಗಳಲ್ಲಿ ಊಟ ಮಾಡಿದ ಬಳಿಕ ಉಳಿದ ಆಹಾರ ಹೊಟ್ಟೆ ಸೇರದೇ, ಕಸದ ತೊಟ್ಟಿ ಸೇರುತ್ತದೆ. ಹೀಗೆ ಅನಗತ್ಯವಾಗಿ ಹಾಳಾಗುವ ಆಹಾರವನ್ನು ತೆಗೆದುಕೊಂಡು ಹಸಿದವರ ಹೊಟ್ಟೆ ತುಂಬಿಸುವ ಮಹತ್ವದ ಕಾರ್ಯವನ್ನು ಹುಬ್ಬಳ್ಳಿಯ ಕರಿಯಪ್ಪ ಶಿರಹಟ್ಟಿ ಹಾಗೂ ಸುನಂದಾ ಶಿರಹಟ್ಟಿ ದಂಪತಿ ಮಾಡುತ್ತಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ನಿತ್ಯವೂ ನೂರಾರು ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಮೂಲಕ ಹಸಿವು ಇಂಗಿಸುತ್ತಿರುವ "ಹಸಿದವರಿಗೆ ‌ಅನ್ನ ಜೋಳಿಗೆ "ಯೇ ಈಗ ನೆರವಿನ ನಿರೀಕ್ಷೆಯಲ್ಲಿದೆ. ಈ ಕಾರ್ಯಕ್ಕೆ ಸಹಕಾರಿಯಾಗಿದ್ದ ವಾಹನವಿಂದು ಕೆಟ್ಟು ನಿಂತಿದ್ದು, ದಾನಿಗಳಿಂದ ವಾಹನದ ನಿರೀಕ್ಷೆಯಲ್ಲಿದೆ ಕರಿಯಪ್ಪ ಶಿರಹಟ್ಟಿ ಕುಟುಂಬ.

ಯಾವುದಾದರೂ ಸಭೆ, ಸಮಾರಂಭ, ಗೃಹ ಪ್ರವೇಶ, ಜನ್ಮದಿನ ಸೇರಿದಂತೆ ‌ವಿವಿಧ ಕಾರ್ಯಕ್ರಮಗಳಲ್ಲಿ ಊಟ ಮಾಡಿದ ಬಳಿಕ ಉಳಿದ ಆಹಾರ ಹೊಟ್ಟೆ ಸೇರದೇ, ಕಸದ ತೊಟ್ಟಿ ಸೇರುತ್ತದೆ. ಹೀಗೆ ಅನಗತ್ಯವಾಗಿ ಹಾಳಾಗುವ ಆಹಾರವನ್ನು ತೆಗೆದುಕೊಂಡು ಹಸಿದವರ ಹೊಟ್ಟೆ ತುಂಬಿಸುವ ಮಹತ್ವದ ಕಾರ್ಯವನ್ನು ಹುಬ್ಬಳ್ಳಿಯ ಕರಿಯಪ್ಪ ಶಿರಹಟ್ಟಿ ಹಾಗೂ ಸುನಂದಾ ಶಿರಹಟ್ಟಿ ದಂಪತಿ ಮಾಡುತ್ತಿದ್ದಾರೆ.

ತಂದೆಯ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪನೆ:

ವೃತ್ತಿಯಲ್ಲಿ ಚಾಲಕರಾಗಿರುವ ಕರಿಯಪ್ಪ ಅವರು ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಈಗ ಹುಬ್ಬಳ್ಳಿಯ ಆನಂದ ನಗರದ ಅಂಬಣ್ಣವರ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ತಮ್ಮ ತಂದೆಯ ಹೆಸರಿನಲ್ಲಿ "ಶ್ರೀ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ " ಸೇವಾ ಟ್ರಸ್ಟ್ ತೆರೆದಿದ್ದಾರೆ. ಇದಕ್ಕಾಗಿಯೇ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿಕೊಂಡು ಅದೇ ವಾಹನದ ಮೂಲಕ ನಿತ್ಯವೂ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ವಿವಿಧ ಸಭೆ-ಸಮಾರಂಭಗಳಲ್ಲಿ ಉಳಿಯುವ ಆಹಾರವನ್ನು ಸಂಗ್ರಹಿಸುವ ಜತೆಗೆ ತಮ್ಮ ಖರ್ಚಿನಲ್ಲಿಯೇ ಒಂದಿಷ್ಟು ಆಹಾರ ಸಿದ್ಧಪಡಿಸಿ ಸ್ವತಃ ತಾವೇ ಹಸಿದವರು ನೆಲೆಸಿರುವ ಸ್ಥಳಗಳಿಗೆ ತೆರಳಿ ಪೂರೈಸುತ್ತಿದ್ದಾರೆ. ಕೆಲಸದ ನಿಮಿತ್ತ ಹೊರ ಹೋದರೆ ಈ ಕಾರ್ಯವನ್ನು ಕರಿಯಪ್ಪ ಅವರ ಪತ್ನಿ ಸುನಂದಾ ನಿರ್ವಹಿಸುತ್ತಾರೆ.

ನಿತ್ಯ ಆಹಾರ ಪೂರೈಕೆ:

ನಿತ್ಯ ಒಂದಿಲ್ಲೊಂದು ಕಡೆಯಿಂದ ಇವರಿಗೆ ಆಹಾರ ದೊರೆಯುತ್ತದೆ. ಇನ್ನು ಕೆಲ ದಾನಿಗಳು ವಿಶೇಷ ದಿನಗಳಲ್ಲಿ ಅಡುಗೆ ಸಿದ್ಧಪಡಿಸಿ ಅಥವಾ ಹೋಟೆಲ್‌ಗಳ ಮೂಲಕ ಆಹಾರ ಕೊಡಿಸುತ್ತಿದ್ದಾರೆ. ಇಂತಹ ಆಹಾರಕ್ಕಾಗಿ ಮಹಾನಗರದ ವ್ಯಾಪ್ತಿಯಲ್ಲಿ ಕಾಯುವ ಕುಟುಂಬಗಳಿವೆ. ಅಂತಹ ಕುಟುಂಬಗಳನ್ನು ಗುರುತಿಸಿರುವ ಕರಿಯಪ್ಪ, ಸ್ವತಃ ಆಯಾ ಪ್ರದೇಶಗಳಿಗೆ ತೆರಳಿ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಈ ವರೆಗೂ 50 ಸಾವಿರಕ್ಕೂ ಅಧಿಕ ಪೊಟ್ಟಣಗಳನ್ನು ತಯಾರಿಸಿ ಹಸಿದವರಿಗೆ ಅನ್ನ ನೀಡುವ ಕಾರ್ಯ ಮಾಡಿದ್ದಾರೆ.

20 ವರ್ಷಗಳಿಂದ ಸೇವೆ:

20 ವರ್ಷಗಳಿಂದ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿರುವ ದಂಪತಿ, ಈ ವರೆಗೆ ಯಾರ ನೆರವಿಲ್ಲದೇ ತಾವೇ ಆಹಾರ ತಲುಪಿಸುತ್ತಿದ್ದಾರೆ. ಆದರೆ, ಇದೀಗ ಆಹಾರದ ಮಹತ್ವ ಅರಿತಿರುವ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ನಿತ್ಯವೂ 10ಕ್ಕೂ ಹೆಚ್ಚು ಜನರಿಂದ ಉಳಿದ ಆಹಾರ ಸಂಗ್ರಹಿಸುವಂತೆ ಕರೆ ಬರುತ್ತಿವೆ.

ಬಡವರು, ನಿರ್ಗತಿಕರಿಗಾಗಿ ಅನ್ನಜೋಳಿಗೆ:

ಹಸಿದವರಿಗೆ ಅನ್ನ ಜೋಳಿಗೆ ಎಂಬ ಹೆಸರಿನ ಟ್ರಸ್ಟ್‌ ತೆರೆಯಲಾಗಿದೆ. ಸಭೆ, ಸಮಾರಂಭಗಳಲ್ಲಿ ಉಳಿದ ಆಹಾರ ಚೆಲ್ಲದೇ ಮೊ: 9380136683 ಈ ಸಂಖ್ಯೆಗೆ ಕರೆ ಮಾಡಿದರೆ ನಾವು ಅಲ್ಲಿಗೆ ತೆರಳಿ ಆಹಾರ ಸಂಗ್ರಹಿಸಿ ಹಸಿದವರಿಗೆ ವಿತರಿಸುತ್ತೇವೆ. ಬಡತನ ಏನು ಎಂಬುದು ನಾನು ಹತ್ತಿರದಿಂದ ಕಂಡಿದ್ದೇವೆ. ಅನ್ನದ ಮಹತ್ವ ಏನು ಎಂಬುದು ನಮಗೆ ಗೊತ್ತಿದೆ. ಒಂದು ಹೊತ್ತಿನ ಊಟ ಮಾಡಲು ಸಮಸ್ಯೆಯಿದೆ ಎಂದು ಗೊತ್ತಾದರೆ ಅಂತಹವರ ಬಳಿಗೆ ಸ್ವತಃ ನಾವೇ ಹೋಗಿ ಆಹಾರ ವಿತರಿಸುತ್ತೇವೆ. ನಾವು ದುಡಿದ ದುಡ್ಡಿನಿಂದ ಈ ಕಾರ್ಯ ಮಾಡುತ್ತೇವೆ ಎನ್ನುತ್ತಾರೆ ಕರಿಯಪ್ಪ ಶಿರಹಟ್ಟಿ.ಕೆಟ್ಟು ನಿಂತ ಓಮಿನಿ ವ್ಯಾನ್:

ಇವರ ನಿಸ್ವಾರ್ಥ ಕಾರ್ಯವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಸೈನಿಕರೊಬ್ಬರು ತಮ್ಮ ಹಳೆಯ ಓಮಿನಿ ವ್ಯಾನ್ ನೀಡಿದ್ದರು. ಈ ವಾಹನ ಸಾಕಷ್ಟು ಅನುಕೂಲವಾಗಿತ್ತಾದರೂ ಈಚೆಗೆ ಅದರ ಅವಧಿ ಪೂರ್ಣಗೊಂಡು ಕೆಟ್ಟು ನಿಂತಿದೆ. ಹಸಿದವರಿಗೆ ಆಹಾರ ಪೂರೈಸಲು ವಾಹನವಿಲ್ಲದೇ ಈ ದಂಪತಿ ಪರದಾಡುತ್ತಿದ್ದಾರೆ. ಬಾಡಿಗೆ ಆಟೋದಲ್ಲಿ ನಿತ್ಯವೂ ಆಹಾರ ಸಂಗ್ರಹಿಸಿ ಹಸಿದವರಿಗೆ ನೀಡುತ್ತಿದ್ದು, ಆರ್ಥಿಕ ಹೊರೆಯಾಗಿದೆ. ಇದರಿಂದಾಗಿ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ.ಹಲವು ವರ್ಷಗಳಿಂದ ಬಡವರು, ನಿರ್ಗತಿಕರು, ಅನಾಥರ ಪರವಾಗಿ ಅನ್ನಜೋಳಿಗೆ ಕಾರ್ಯ ನಡೆಸುತ್ತಿದ್ದೇವೆ. ಇದೀಗ ಆಹಾರ ಪೂರೈಸುವ ವಾಹನ ಕೆಟ್ಟಿದೆ. ಆಟೋ ಬಾಡಿಗೆ ಪಡೆದು ನಿತ್ಯವೂ ಅನ್ನ ಪೂರೈಸುತ್ತಿದ್ದೇವೆ. ಇದರಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ. ಯಾರಾದರೂ ವಾಹನ ನೀಡಿದರೆ ಹೆಚ್ಚಿನ ಸೇವೆ ಮಾಡಲು ಅನಕೂಲವಾಗಲಿದೆ.

ಕರಿಯಪ್ಪ ಶಿರಹಟ್ಟಿ, ಅನ್ನ ಜೋಳಿಗೆ ಸ್ಥಾಪಕ

PREV

Recommended Stories

ಮೊಬೈಲ್‌ ಬಳಕೆ : ಉಗ್ರ, ವಿಕೃತ ಕಾಮಿಗೀಗ ಗ್ರಿಲ್‌
ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ