ಕಾರಹುಣ್ಣಿಮೆ ಆಚರಣೆ ಸಜ್ಜಾದ ಅನ್ನದಾತರು

KannadaprabhaNewsNetwork |  
Published : Jun 29, 2026, 02:00 AM IST
ಕಾರ ಹುಣ್ಣಿಮೆ ಅಂಗವಾಗಿ ನವಲಗುಂದದಲ್ಲಿ ಎತ್ತುಗಳಿಗೆ ಅಲಂಕಾರ ಮಾಡಿರುವುದು. | Kannada Prabha

ಸಾರಾಂಶ

ಉತ್ತರ ಕರ್ನಾಟಕ ಸೇರಿದಂತೆ ತಾಲೂಕಿನಾದ್ಯಂತ ರೈತ ಸಮೂಹಕ್ಕೆ ದೊಡ್ಡ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲು ಅನ್ನದಾತರು ಸಜ್ಜಾಗಿದ್ದಾರೆ.

ಫಕೃದ್ದೀನ್‌ ಎಂ.ಎನ್.

ನವಲಗುಂದ: ಉತ್ತರ ಕರ್ನಾಟಕ ಸೇರಿದಂತೆ ತಾಲೂಕಿನಾದ್ಯಂತ ರೈತ ಸಮೂಹಕ್ಕೆ ದೊಡ್ಡ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲು ಅನ್ನದಾತರು ಸಜ್ಜಾಗಿದ್ದಾರೆ.

ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ಆರಂಭವಾಗುವ ರೈತರ ಮೊದಲ ಹಬ್ಬವೇ ಕಾರಹುಣ್ಣಿಮೆ. ಅನ್ನದಾತರ ಒಡನಾಡಿ ಎತ್ತುಗಳಿಗೆ ಕೃತಜ್ಞತೆ ಹೇಳುವುದರ ಜತೆಗೆ ಧನ್ಯತಾಭಾವ ಅರ್ಪಿಸುವ ಈ ಆಚರಣೆಗೆ ಅನ್ನದಾತರು ಉತ್ಸುಕರಾಗಿದ್ದಾರೆ.

ವೈಜ್ಞಾನಿಕ ಆಚರಣೆ

ಬಾಣಲೆಯಂಥ ಸುಡು ಬಿಸಿಲಿನಲ್ಲಿ ಅನ್ನದಾತನೊಂದಿಗೆ ದುಡಿಯುವ ಎತ್ತುಗಳಿಗೆ ಧನ್ಯವಾದ ಹೇಳುವ ದಿನವಾದ ಕಾರಹುಣ್ಣಿಮೆ ಪ್ರಯುಕ್ತ ರಾಸುಗಳಿಗೆ ಸ್ನಾನ ಮಾಡಿಸಿ, ಔಷಧಿ ಗುಣವುಳ್ಳ ಪೊಟ್ಟ ಕುಡಿಸಿ, ಬಣ್ಣಬಳಿದು, ಅಲಂಕರಿಸಿ ಆಚರಣೆಯಲ್ಲಿ ತೊಡಗುವುದು ಸಂಪ್ರದಾಯ.

ರೈತರು ತಮ್ಮ ಮನೆಯಲ್ಲಿ ಅಂದು ಹೋಳಿಗೆ ಸೇರಿದಂತೆ ವಿವಿಧ ಖಾದ್ಯ ತಯಾರಿಸಿ ಭಕ್ತಿ ಸಮರ್ಪಿಸುವ ಮೂಲಕ ತಮ್ಮ ಬದುಕಿನುದ್ದಕ್ಕೂ ಕಷ್ಟ ಸುಖಗಳಲ್ಲಿ ಭಾಗಿಯಾಗುವ ರಾಸುಗಳಿಗೆ ನಮಸ್ಕರಿಸುತ್ತಾರೆ. ವಿವಿಧ ಬಣ್ಣಗಳ ಬಾಸಿಂಗ, ಜತ್ತಿಗೆ, ಹಣೆಕಟ್ಟು ಹಗ್ಗ ಬಾರಕೋಲ, ಕೊಬ್ಬರಿ, ಗೊಂಡೆ, ಗಾಜಮಕಡಿ, ಮಿಂಚು ಬಣ್ಣಗಳಿಂದ ಎತ್ತುಗಳನ್ನು ಶೃಂಗರಿಸಲಾಗುತ್ತದೆ.

ಕರಿ ಹರಿಯುವ ಸ್ಪರ್ಧೆ

ಕಾರ ಹಣ್ಣಿಮೆ ದಿನ ಅಲಂಕಾರ ಮಾಡಿದ ಜೋಡೆತ್ತುಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ರಾಸುಗಳನ್ನು ಓಡಿಸುವ (ಕರಿ ಹರಿಯುವ) ಸ್ಪರ್ಧೆ ನಡೆಸಲಾಗುತ್ತದೆ. ವೇಗವಾಗಿ ಓಡಿ ಗ್ರಾಮ ಚಾವಡಿ ಹತ್ತಿರ ಕಟ್ಟಿದ ಬೇವಿನಸೊಪ್ಪು, ಐದು ತರಹದ ಹಣ್ಣು, ಕೊಬ್ಬರಿ ಹಾಗೂ ಬೆಲ್ಲದಿಂದ ಕಟ್ಟಿದ ಸರವನ್ನು ಎತ್ತು ಹರಿಯುವ ಪದ್ಧತಿ ಇಂದಿಗೂ ಪ್ರಚಲಿತದಲ್ಲಿದೆ.

ಬೆಳೆಯ ಭವಿಷ್ಯ

ಸ್ಥಳೀಯ ಮಂಜು ಸುಬೇದಾರ ಅವರ ಶೃಂಗಾರಗೊಂಡ ಹೋರಿ ಅಥವಾ ಎತ್ತುಗಳನ್ನು ಮೆರವಣಿಗೆ ಮಾಡಲಾಗುತ್ತದೆ. ನಂತರ ಗ್ರಾಮ ಚಾವಡಿ ಹತ್ತಿರ ಕಟ್ಟಲಾಗಿದ್ದ ಸರದ ಕಡೆ ರಭಸವಾಗಿ ಬಿಡಲಾಗುತ್ತದೆ. ಬಿಳಿ ಎತ್ತು ಕರಿ ಹರಿದರೆ ಆ ವರ್ಷ ಬಿಳಿ ಧಾನ್ಯಗಳು ಹೆಚ್ಚು ಬೆಳೆಯುತ್ತವೆ. ಅದರಂತೆ ಕಪ್ಪು ಕಂದು ಬಣ್ಣದ ಎತ್ತುಗಳು ಜಯಶಾಲಿಯಾದರೆ ಆಯಾ ಬಣ್ಣದ ಧಾನ್ಯಗಳು ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆ ರೈತಾಪಿ ವಲಯದಲ್ಲಿದೆ.

ಹಿಂದೆ ಸಮಯಕ್ಕೆ ಸರಿಯಾಗಿ ಮಳೆ-ಬೆಳೆ ಆಗುತ್ತಿದ್ದವು. ಅದರಂತೆ ಹಿರಿಯರು ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬೆಳೆಯಾಗದಿರುವುದು ಬೇಸರ ತಂದಿದೆ. ಆದರೂ ಹಿರಿಯರು ನಡೆಸಿಕೊಂಡ ಬಂದ ಸಂಪ್ರದಾಯ ಬಿಡುವುದಿಲ್ಲ ಆಚರಿಸುತ್ತೇವೆ ಎನ್ನುತ್ತಾರೆ ರೈತರಾದ ಮಂಜುನಾಥ ಸುಬೇದಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾಸ್ಪತ್ರೆಗೆ ಇರುವುದು ಒಂದೇ ಆ್ಯಂಬುಲೆನ್ಸ್
ಹೊರಗುತ್ತಿಗೆ ನೌಕರರ ನೂತನ ಕನಿಷ್ಠ ವೇತನ ಆದೇಶ ತಕ್ಷಣ ಜಾರಿಗೊಳಿಸಲು ಆಗ್ರಹ